ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ನೀತಿ ಸಂಹಿತ ಜಾರಿಯಾಗಿರುವುದು ಕಾವೇರ ನಿರ್ವಹಣಾ ಮಂಡಳಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಆಯುಕ್ತ ಓಪಿ ರಾವತ್ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓಪಿ ರಾವತ್ ಅವರು, ನೀತಿ ಸಂಹಿತೆಗೂ ಕಾವೇರ ನಿರ್ವಹಣಾ ಮಂಡಳಿ ರಚನೆಗೂ ಯಾವುದೇ ಸಂಬಂಧವಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಮೇಲೆ ನೀತಿ ಸಂಹಿತೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬಹುದು. ಇದಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಓಪಿ ರಾವತ್ ಹೇಳಿದರು.
ಇಂದು ಬೆಳಗ್ಗೆಯಷ್ಟೇ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗ ವೇಳಪಟ್ಟಿ ಪ್ರಕಟಿಸಿತ್ತು. ಅಲ್ಲದೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿತ್ತು. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮೇಲೆ ನೀತಿ ಸಂಹಿತೆ ಜಾರಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿತ್ತು. ಇದೀಗ ಚುನಾವಣಾ ಆಯುಕ್ತ ಓಪಿ ರಾವತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಮೇ 12ರಂದು ಕರ್ನಾಟಕ ವಿಧಾನಸಭೆಗೆ ಮತದಾನ ನಡೆಯಲಿದ್ದು, ಮೇ 15ರಂದು ಮತ ಎಣಿಕೆ ಕಾರ್ಯ ಮತ್ತು ಫಲಿತಾಂಶ ಪ್ರಕಟವಾಗಲಿದೆ.