ಅಮರಾವತಿ: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರದೇ ಏಕಾಂಗಿಯಾಗಿ ಟಿಡಿಪಿ ಚುನಾವಣೆ ಸ್ಪರ್ಧಿಸಿದ್ದರೆ ಇನ್ನೂ 15 ಸ್ಥಾನಗಳಲ್ಲಿ ಜಯ ಸಾಧಿಸಬಹುದಿತ್ತು ಎಂದು ಆಂದ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಶುಕ್ರವಾರ ಅಮರಾವತಿಯಲ್ಲಿ ನಡೆದ ಟಿಡಿಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, ತಾವು ತಮ್ಮ ಪಕ್ಷ ರಾಜಕೀಯ ಲಾಭಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದೆವು ಎಂದು ಹೇಳಲಾಗುತ್ತಿದೆ. ಆದರೆ ಆ ಆರೋಪಗಳು ಸತ್ಯಕ್ಕೆ ದೂರವಾದದ್ದು. ಅಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದಿದ್ದರೆ ನಮ್ಮ ಪಕ್ಷ ಇನ್ನೂ 15 ಹೆಚ್ಚುವರಿ ಸ್ಥಾನಗಳಲ್ಲಿ ಜಯ ಸಾಧಿಸುತ್ತಿತ್ತು. ಆದರೆ ನಮಗೆ ವಿಭಜಿತ ಆಂಧ್ರ ಪ್ರದೇಶದ ಅಭಿವೃದ್ಧಿ ಮುಖ್ಯವಾಗಿತ್ತು. ಹೀಗಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದೆವು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಟಿಡಿಪಿ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸಿದ್ದವಿಲ್ಲ. ಆದರೆ ಇಂದಿಗೂ ಉತ್ತರ ಮತ್ತು ಈಶಾನ್ಯ ಭಾರತದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ರಾಜ್ಯದ ಲಾಭ ನೀಡಲಾಗುತ್ತಿದೆ. ವಿಶೇಷ ಸ್ಥಾನಮಾನ ನಮ್ಮ ಹಕ್ಕು..ನಮ್ಮ ಹಕ್ಕಿಗಾಗಿ ನಾನು ಕೊನೆಯವರೆಗೂ ಹೋರಾಡುತ್ತೇವೆ ಎಂದು ಹೇಳಿದರು.
ಕಳೆದ ಮಾರ್ಚ್ ಮೊದಲ ವಾರದಲ್ಲಿ ಟಿಡಿಪಿ ಬಿಜೆಪಿ ಮೈತ್ರಿ ಮುರಿದುಬಿದ್ದಿತ್ತು.