ದೇಶ

ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು:ಕಾಂಗ್ರೆಸ್

Sumana Upadhyaya

ನವದೆಹಲಿ: ಸಿಬಿಎಸ್ ಇ ಪೇಪರ್ ಸೋರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮೌನ ಮುರಿದು ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಪೇಪರ್ ಸೋರಿಕೆ ಕೇಸಿನಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಮತ್ತು ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಬಿಜೆಪಿ ನಾಯಕರ ಮೌನ ಪ್ರಶ್ನೆಯನ್ನು ಹುಟ್ಟುಹಾಕುತ್ತಿದ್ದು ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಈ ದೇಶದ ಯುವಕರು ಸಿನಿಕರಾಗಿ ಬದಲಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಇದೊಂದು ಗಂಭೀರ ವಿಚಾರ. ಬಿಜೆಪಿಯ ಹಿರಿಯ ನಾಯಕರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಇವರೆಲ್ಲರೂ ಮೌನವಾಗಿದ್ದಾರೆ ಯಾಕೆ? ಇದಕ್ಕೆ ಮೋದಿಯವರು ಉತ್ತರಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಬೇಕೆಂದರು.

ಸರ್ಕಾರ ಪೂರ್ಣಪ್ರಮಾಣದ ರಾಜಕೀಯ ಮತ್ತು ಅಲ್ಪಾವಧಿಯ ಆಡಳಿತದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ಪೋಷಕರು ಮತ್ತು ಮಕ್ಕಳನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ದೆಹಲಿ ಮತ್ತು ದೆಹಲಿ ಸುತ್ತಮುತ್ತಲ ಪ್ರದೇಶಗಳ ವಿದ್ಯಾರ್ಥಿಗಳು ಹೊರತುಪಡಿಸಿ ಬೇರೆ ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಹಾಜರಾಗಬೇಕಿಲ್ಲ ಎಂದು ಸಚಿವ ಪ್ರಕಾಶ್ ಜಾವದೇಕರ್ ಹೇಳುತ್ತಿದ್ದಾರೆ. ಇಂದು ಸರ್ಕಾರ ಏನು ಬಯಸುತ್ತದೆ ಎಂದು ಪೋಷಕರು ಮತ್ತು ಮಕ್ಕಳಿಗೆ ಗೊತ್ತಾಗುತ್ತಿಲ್ಲ ಎಂದರು.

ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಇಡೀ ದೇಶದ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಜಾರ್ಖಂಡ್ ಪೊಲೀಸರು ಹೇಳುತ್ತಿದ್ದಾರೆ, ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲವೇಕೆ? ಇಂದಿನ ಯುವ ಜನಾಂಗದ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆಯೇ ಎಂದು ಕೇಳಿದರು.

SCROLL FOR NEXT