ಲಡಾಕ್ ನಲ್ಲಿ ಭಾರತ, ಚೀನಾ ಗಡಿ ಸಿಬ್ಬಂದಿ ಸಭೆ
ಪ್ರಧಾನಿ ನರೇಂದ್ರ ಮೋದಿ ಚೀನಾ ಭೇಟಿ ಬಳಿಕ ಇದೇ ಮೊದಲ ಬಾರಿಗೆ ಲಡಾಕ್ ನಲ್ಲಿ ಭಾರತ-ಚೀನಾ ಗಡಿ ಸಿಬ್ಬಂದಿಗಳು ಸಭೆ ನಡೆಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚೀನಾ ಭೇಟಿ ಬಳಿಕ ಇದೇ ಮೊದಲ ಬಾರಿಗೆ ಲಡಾಕ್ ನಲ್ಲಿ ಭಾರತ-ಚೀನಾ ಗಡಿ ಸಿಬ್ಬಂದಿಗಳು ಸಭೆ ನಡೆಸಿದ್ದಾರೆ.
ಪರಸ್ಪರ ವಿಶ್ವಾಸವನ್ನು ಹೆಚ್ಚುಗೊಳಿಸುವ, ಎಲ್ಒಸಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ, ಕಾರ್ಯನಿರ್ವಹಿಸಲು ಎರಡೂ ದೇಶಗಳ ಗಡಿ ಸಿಬ್ಬಂದಿಗಳು ಒಪ್ಪಿಗೆ ಸೂಚಿಸಿದ್ದು, ಗಡಿ ನಿರ್ವಹಣೆಗೆ ಸಂಬಂಧಿಸಿದಂತೆಯೂ ಚರ್ಚೆ ನಡೆದಿದೆ.
ವಿವಾದಿತ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಕ್ಸೀ ಜಿನ್ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ತಮ್ಮ ದೇಶಗಳಿಗೆ ಕಾರ್ಯತಂತ್ರದ ಮಾರ್ಗದರ್ಶನ ನೀಡುವ ಮೂಲಕ ಪರಸ್ಪರ ವಿಶ್ವಾಸ ಗಟ್ಟಿಗೊಳಿಸಲು ತೀರ್ಮಾನಿಸಲಾಗಿತ್ತು. ಡೊಕ್ಲಾಮ್ ವಿವಾದ ಬಳಿಕ ನಡೆದ ಮೋದಿ-ಕ್ಸೀ ಜಿನ್ಪಿಂಗ್ ಅವರ ಮೊದಲ ಭೇಟಿಯನ್ನು ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಭೇಟಿ ಎಂದೇ ವಿಶ್ಲೇಷಿಸಲಾಗಿತ್ತು, ಈಗ ಗಡಿಯಲ್ಲಿರುವ ಉಭಯ ದೇಶಗಳ ಸಿಬ್ಬಂದಿಗಳ ಭೇಟಿಯಲ್ಲಿಯೂ ಇದೇ ಮಾದರಿಯ ನಡೆ ಕಂಡುಬಂದಿದೆ.