ದೇಶ

ಅಕ್ರಮ ಭೂ ಒತ್ತುವರಿ ವಿರುದ್ಧ ಕಾರ್ಯಾಚರಣೆ; ಅಧಿಕಾರಯನ್ನೇ ಗುಂಡು ಹಾರಿಸಿ ಕೊಂದ ಹೊಟೆಲ್ ಮಾಲೀಕ

Srinivasamurthy VN
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಹೊಟೆಲ್ ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಹೊಟೆಲ್ ಮಾಲೀಕನೋರ್ವ ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿಯನ್ನೇ ಗುಂಡು ಹಾರಿಸಿಕೊಂದು ಹಾಕಿದ್ದಾನೆ.
ಮಂಗಳವಾರ ಮಧ್ಯಾಹ್ನದಿಂದ ಹಿಮಾಚಲ ಪ್ರದೇಶ ಸೋಲನ್ ಪ್ರಾಂತ್ಯದಲ್ಲಿ ಸಹಾಯಕ ಪಟ್ಟಣ ಮತ್ತು ಯೋಜನಾ ಅಧಿಕಾರಿ ಶೈಲಾ ಬಾಲಾ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ಒತ್ತುವರಿ ಕಾರ್ಯಾಚರಣೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದೂ ಕೂಡ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಆದರೆ ಇದರಿಂದ ಆಕ್ರೋಶಗೊಂಡ ಹೊಟೆಲ್ ಮಾಲೀಕನೋರ್ವ ತನ್ನ ಪಿಸ್ತೂಲ್ ತಂದು ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರೊಳಗಾಗಲೇ ಅವರು ಮೃತಪಟ್ಟಿದ್ದರು.
ಆರೋಪಿ ಗೆಸ್ಟ್ ಹೌಸ್ ಮಾಲೀಕ ವಿಜಯ್ ಕುಮಾರ್
ಸರ್ಕಾರದ ಆದೇಶದ ಮೇರೆಗೆ ಅಧಿಕಾರಿ ಶೈಲಾ ಬಾಲಾ ಅವರು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಒಟ್ಟು 13 ಕಟ್ಟಡಗಳನ್ನು ನೆಲಸಮ ಮಾಡಿದ್ದರು. ಇನ್ನೂ ಕೆಲವು ಕಟ್ಟಡಗಳ ಒತ್ತುವರಿ ಕಾರ್ಯಾಚರಣೆ ಬಾಕಿ ಇದ್ದುದರಿಂದ ಇಂದೂ ಕೂಡ ಕಾರ್ಯಾಚರಣೆ ಮುಂದುವರೆದಿತ್ತು. ಅಷ್ಟರೊಳಗಾಗಲೇ ದುರಂತ ಸಂಭವಿಸಿದೆ. ವಿವಾದಿತ ಮತ್ತು ಸುರಕ್ಷಿತ ವಲ್ಲದ ಪ್ರದೇಶದಲ್ಲಿ ಹೊಟೆಲ್ ಗಳು ಅಕ್ರಮವಾಗಿ ತಲೆ ಎತ್ತಿರುವುದನ್ನು ಮನಗಂಡ ಅಧಿಕಾರಿ ಶೈಲಾ  ಬಾಲಾ ಅವರು ಕಾರ್ಯಾಚರಣೆ ಕೈಗೊಂಡಿದ್ದರು. 
ಇದೇ ವಿಚಾರವಾಗಿ ಸೋಲನ್ ನಲ್ಲಿರುವ ನಾರಾಯಣಿ ಗೆಸ್ಟ್ ಹೌಸ್ ಮಾಲೀಕರೊಂದಿಗೆ ಚರ್ಚಿಸುತ್ತಿದ್ದಾಗ ಮಾಲೀಕ ವಿಜಯ್ ಕುಮಾರ್ ಅಧಿಕಾರಿ ವಿರುದ್ಧ ಆಕ್ರೋಶಗೊಂಡು ನೋಡ ನೋಡುತ್ತಿದ್ದಂತೆಯೇ ಗನ್ ನಿಂದ ಗುಂಡು ಹಾರಿಸಿದ ಎಂದು ಸಹಾಯಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ವೈದ್ಯರು ನೀಡಿರುವ ಮಾಹಿತಿಯಂತೆ ಶೈಲಾ ಬಾಲಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತಿಬ್ಬರು ಅಧಿಕಾರಿಗಳಿಗೆ ಗುಂಡೇಟು ತಗುಲಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ನೂರಾರು ಮಂದಿಯ ಬಲಿತೆಗೆದುಕೊಂಡ ಉತ್ತರಾಖಂಡ ಪ್ರವಾಹ ಇನ್ನೂ ಹಸಿರಾಗಿರುವಂತೆಯೇ ಮುಂಬರುವ ಮಳೆಗಾಲಕ್ಕೆ ಹಿಮಾಚಲ ಪ್ರದೇಶ ಸರ್ಕಾರ ಸಕಲ ಸಿದ್ಧತೆ ನಡೆಸಿಕೊಂಡಿದೆ. ಇದೇ ಕಾರಣಕ್ಕೆ ಅಪಾಯಕಾರಿ ಸ್ಥಳಗಳಲ್ಲಿರುವ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
SCROLL FOR NEXT