ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಮಹಾಭಿಯೋಗಕ್ಕೆ ನಿಲುವಳಿ ಸೂಚನೆ ಮಂಡಿಸಿದ್ದ ಪ್ರತಿಪಕ್ಷಗಳ ವಿರುದ್ಧ ಸರ್ವೋಚ್ಛ ನ್ಯಾಯಾಲಯ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮಹಾಭಿಯೋಗಕ್ಕೆ ಸಂಬಂಧಿಸಿದಂತೆ ಸಂಸದರು ಸಾರ್ವಜನಿಕ ಹೇಳಿಕೆ ನೀಡದಂತೆ ತಡೆಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರು, ರಾಜ್ಯಸಭೆ ನಿಯಮಗಳ ಪ್ರಕಾರ, ಸಂಸದರು ಸಂಸತ್ ಗಮನಕ್ಕೆ ತರದೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಜಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ ಎಂದು ಹೇಳಿದೆ.
ಅರ್ಜಿಯ ತುರ್ತು ವಿಚಾರಣೆ ಅಗತ್ಯ ಇಲ್ಲ ಎಂದು ಹೇಳಿ ಕೋರ್ಟ್, ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮುಂದೂಡಿದೆ.
ಪ್ರತಿಪಕ್ಷಗಳು ದೀಪಕ್ ಮಿಶ್ರಾ ಅವರ ವಿರುದ್ಧ ಮಂಡಿಸಿದ್ದ ಮಹಾಭಿಯೋಗ ನಿಲುವಳಿ ಸೂಚನೆಯನ್ನು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದು, ಅದನ್ನು ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಇದರ ಬೆನ್ನಲ್ಲೇ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಸಂಸದರು ನ್ಯಾಯಾಧೀಶರ ವಜಾ ಕುರಿತು ಹೇಳಿಕೆ ನೀಡದಂತೆ ತಡೆಯಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics