ಐಆರ್ ಸಿಟಿಸಿ ಹಗರಣ: ಲಾಲು ಯಾದವ್ ವಿಚಾರಣೆಗೆ ಮೂರು ವಾರ ಕಾಲಾವಕಾಶ ಪಡೆದ ಸಿಬಿಐ
ನವದೆಹಲಿ: ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರ ವಿರುದ್ಧದ ಐಆರ್ ಸಿಟಿಸಿ ಹೋಟೆಲ್ ಹಂಚಿಕೆ ಪ್ರಕರಣ ಸಂಬಂಧ ತನಿಖೆ ನಡೆಸಲು ಸಿಬಿಐ ಗೆ ಮೂರು ವಾರಗಳ ಕಾಲಾವಕಾಶ ನೀಡಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ,.
ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ ಸಿಟಿಸಿ)ಗುಂಪಿನ ಜನರಲ್ ಮ್ಯಾನೇಜರ್ ಆಗಿದ್ದ ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯಬಿ. ಕೆ. ಅಗರ್ವಾಲ್ ಅವರನ್ನು ಜೂ. 1ರವರೆಗೆ ವಿಚಾರಣೆ ನಡೆಸಲು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಸಿಬಿಐಗೆ ನಿರ್ದೇಶನ ನೀಡಿದರು
ಏತನ್ಮಧ್ಯೆ ಸಿಬಿಐ ಇದೇ ಪ್ರಕರಣಕ್ಕೆ ಸಂಬಂಧಿಸಿ 20,000 ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಏಪ್ರಿಲ್ 16ರಂದು ತನಿಕಾ ಸಂಸ್ಥೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಎರಡು ಕಂಪನಿಗಳು ಹಾಗೂ 12 ಜನರ ಹೆಸರುಗಳಿದ್ದವು.ಯಾದವ್ ಕುಟುಂಬವಲ್ಲದೆ ಮಾಜಿ ಕೇಂದ್ರ ಸಚಿವರಾದ ಪ್ರೇಮ್ ಚಂದ್ ಗುಪ್ತಾ, ಅವರ ಪತ್ನಿ ಸರಳಾ ಗುಪ್ತಾ, ಅಗರ್ವಾಲ್, ಐಎಸ್ ಆರ್ ಟಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಪಿ ಕೆ ಗೋಯಲ್, ನಿರ್ದೇಶಕ ರಾಕೇಶ್ ಸಕ್ಸೇನಾ ಅವರ ಹೆಸರುಗಳು ಸಹ ಚಾರ್ಜ್ ಶೀಟಿನಲ್ಲಿದೆ.
ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಕರಾರಿಗಾಗಿ ನಿರ್ದಿಷ್ಟ ಬಿಡ್ಡುದಾರರಿಗೆ ಗುತ್ತಿಗೆಗಳನ್ನು ನೀಡಲು ಕೋಟ್ಯಂತರ ರೂ.ಗಳ ಬೆಲೆಬಾಳುವ ಭೂಮಿಯನ್ನು ಲಂಚ ರೂಪದಲ್ಲಿ ಪಡೆದ ಆರೋಪವನ್ನು ಲಾಲೂ ಪ್ರಸಾದ್ ಯಾದವ್ ಮತ್ತಿತರರು ಎದುರಿಸುತ್ತಿದ್ದಾರೆ.