ಇಂಫಾಲ್: ಮಣಿಪುರದಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಮುಖ್ಯಕಚೇರಿ ಸಮೀಪ ಐಇಡಿ ಸ್ಫೋಟಗೊಂಡಿದ್ದು ಈ ಸ್ಫೋಟದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಮಣಿಪುರದ ಪೂರ್ವ ಇಂಫಾಲ್ ಜಿಲ್ಲೆಯ ಕೊಯಿರೆಂಗಿ ಬಿಎಸ್ಎಫ್ ಕ್ಯಾಂಪಸ್ ನಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಐಇಡಿ ಸ್ಫೋಟಗೊಂಡಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡಿದ್ದು ಇದೀಗ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ ಇಬ್ಬರು ನಾಗರೀಕರು ಸಹ ಗಾಯಗೊಂಡಿದ್ದಾರೆ.
ಯೋಧರಿಬ್ಬರು ಮೃತಪಟ್ಟಿರುವುದನ್ನು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ. ಮೇಘಚಂದ್ರ ಖಚಿತ ಪಡಿಸಿದ್ದಾರೆ. ಒಬ್ಬ ಮಹಿಳೆ, ಒಬ್ಬ ಅಂಗಡಿ ಮಾಲೀಕ ಗಾಯಗೊಂಡಿದ್ದು ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.