ಬಿಜೆಪಿ ಶಾಸಕ ಕುಲ್ದೀಗ್ ಸಿಂಗ್ ಸೆಂಗಾರ್
ನವದೆಹಲಿ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಗ್ ಸಿಂಗ್ ಸೆಂಗಾರ್ ಅವರ ಪಾತ್ರವಿರುವುದು ಸತ್ಯ ಎಂದು ಸಿಬಿಐ ಶುಕ್ರವಾರ ಖಚಿತಪಡಿಸಿದೆ.
ಜೂ.4 2017ರಂದು ಉತ್ತರಪ್ರದೇಶದ ಮಖಿ ಎಂಬ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರ ಹೆಸರು ಕೇಳಿ ಬಂದಿತ್ತು. ಘಟನೆ ಬಳಿಕ ಬಾಲಕಿಯ ಕುಟುಂಬಸ್ಥರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನೆಯ ಮುಂದೆ ಸಾಮೂಹಿಕ ಆತ್ಮಹತ್ಯೆಗೆ ಯತ್ನ ನಡೆಸಿತ್ತು. ಈ ವೇಳೆ ಬಾಲಕಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾಗ, ಪೊಲೀಸ್ ಕಸ್ಟಡಿಯಲ್ಲಿ ಬಾಲಕಿಯ ತಂದೆ ಮೃತಪಟ್ಟಿದ್ದರು.
ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಬಿಜೆಪಿ ಶಾಸಕನ ವಿರುದ್ಧ ಸಾಕಷ್ಟು ಆಕ್ರೋಶಗಳೂ ಕೂಡ ವ್ಯಕ್ತವಾಗಿದ್ದವು. ಬಳಿಕ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಾಕಷ್ಟು ಬೆಳವಣಿಗೆಗಳ ಬಳಿಕ ಶಾಸಕನನ್ನು ಬಂಧನಕ್ಕೊಳಪಡಿಸಿದ್ದರು. ತನಿಖೆಗೆ ಮುಂದಾಗಿದ್ದ ಸಿಬಿಐ ಅಧಿಕಾರಿಗಳು ಏ.13-14ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.
ವೈದ್ಯಕೀಯ ಮಾಹಿತಿ ಕುರಿತು ಹೇಳಿಕೆ ನೀಡಿರುವ ಪೊಲೀಸರು, ಬಾಲಕಿ ಮೇಲೆ ಶಾಸಕ ಅತ್ಯಾಚಾರ ನಡೆಸಿರುವುದು ನಿಜ ಎಂದು ದೃಢಪಡಿಸಿದ್ದಾರೆ.
ಜೂ.20 ರಂದೂ ಪೊಲೀಸರಿಗೆ ದೂರು ನೀಡಿದ್ದ ಬಾಲಕಿ, ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಅವರು ಜೂ.4 ರಂದು ನನ್ನ ಮನೆಯಲ್ಲಿ ಅತ್ಯಾಚಾರ ನಡೆಸಿದ್ದರು. ಶಶಿ ಸಿಂಗ್ ಎಂಬಾತ ಕೊಠಡಿಯ ಹೊರಗೆ ಸಿಬ್ಬಂದಿಯಾಗಿ ನಿಂತಿದ್ದ ಎಂದು ಹೇಳಿಕೊಂಡಿದ್ದಳು.
ಇದೀಗ ಸಿಬಿಐ ಬಿಜೆಪಿ ಶಾಸಕನ ಪಾತ್ರವಿರುವುದಾಗಿ ದೃಢಪಡಿಸಿರುವ ಹಿನ್ನಲೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಹಾಗೂ ಕುಟುಂಬಸ್ಥರು ಶಾಸಕನಿಗೆ ಮರಣ ದಂಡನೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ನನ್ನ ಮೇಲೆ ಅತ್ಯಾಚಾರ ಮಾಡಿದ್ದಕ್ಕೆ ಹಾಗೂ ನನ್ನ ತಂದೆಯನ್ನು ಹತ್ಯೆ ಮಾಡಿದ್ದಕ್ಕಾಗಿ ಬಿಜೆಪಿ ಶಾಸಕನಿಗೆ ಮರಣದಂಡನೆ ನೀಡುವಂತೆ ಈ ಮೂಲಕ ನಾನು ಆಗ್ರಹಿಸುತ್ತೇನೆಂದು ಸಂತ್ರಸ್ತ ಬಾಲಕಿ ಆಗ್ರಹಿಸಿದ್ದಾಳೆ.