ದೇಶ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ: 14 ಸಾವು, 20 ಜನರಿಗೆ ಗಾಯ

Manjula VN
ಕೋಲ್ಕತಾ; ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಆರಂಭಗೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಘರ್ಷಣೆ ಏರ್ಪಟ್ಟ ಪರಿಣಾಮ 14 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸೋಮವಾರ ನಡೆದಿದೆ. 
ಚುನಾವಣೆ ವೇಳೆ ಹಲವೆಡೆ ಟಿಎಂಸಿ ಹಾಗೂ ಸಿಪಿಐ(ಎಂ) ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಘರ್ಷಣೆ ವೇಳೆ ಹಲವು ಮಾಧ್ಯಮಗಳ ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ವರದಿಗಳು ತಿಳಿಸಿವೆ. 
ಕೂಚ್ ಬೆಹರ್ ಬಳಿ ಘರ್ಷಣೆ ನಡೆದಿದ್ದು, ಘರ್ಷಣೆ ವೇಳೆ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಹಲವಾರು ಮಂದಿ ಮತಚಲಾಯಿಸಲು ತೆರಳಿದ್ದರು. ಮತದಾನ ಕ್ಷೇತ್ರಗಳ ಬಳಿ ತೆರಳಿದ್ದಾಗ ಸ್ಥಳಕ್ಕೆ ಬಂದ ಟಿಎಂಸಿ ಕಾರ್ಯಕರ್ತರು ಲಾಠಿ ಹಾಗೂ ದೊಡ್ಡ ದೊಡ್ಡ ದೊಣ್ಣೆಗಳ ಮೂಲಕ ದಾಳಿ ನಡೆಸಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗಾಯಾಗಳುಗಳನ್ನು ಎಂಜೆಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಈ ನಡುವೆ ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಕುಲ್ತಾಲಿ ಎಂಬ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತ ಆರೀಫ್ ಗಜಿ ಎಂಬುವವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಇದರಂತೆ ಸಿಪಿಐ ಕಾರ್ಯಕರ್ತನ ಮೇಲೆ ದಾಳಿ ಕೂಡ ನಡೆದಿದ್ದು, ಉತ್ತರ 24 ಪರ್ಗನಾಸ್ ನಲ್ಲಿದ್ದ ಮನೆಗೆ ಕಳೆದ ರಾತ್ರಿ ಬೆಂಕಿ ಹಚ್ಚಿದ ಪರಿಣಾಮ ಸಿಪಿಐ ಕಾರ್ಯಕರ್ತ ಹಾಗೂ ಆತನ ಪತ್ನಿ ಸಜೀವ ದಹನವಾಗಿದ್ದಾರೆಂದು ಹೇಳಲಾಗುತ್ತಿದೆ. 

ಉತ್ತರ 24 ಪರ್ಗನಾಸ್, ಬುರ್ದ್ವಾನ್, ಕೂಚ್ಬೆಹಾರ್ ಮತ್ತು ದಕ್ಷಿಣ 24 ಪರ್ಗನಾಸ್ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆಯುತ್ತಿರುವುದಾಗಿ ಚುನಾವಣಾ ಆಯೋಗಕ್ಕೆ ಹಲವಾರು ದೂರುಗಳು ಬರುತ್ತಿವೆ ಎಂದು ತಿಳಿದುಬಂದಿದೆ. 

ಮುರ್ಶಿದಾಬಾದ್ ನಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟ ಪರಿಣಾಮ ಸ್ಥಳದಲ್ಲಿದ್ದ ಜನರು ಬ್ಯಾಲೆಟ್ ಪೇಪರ್ ಗಳನ್ನು ಎಸೆದು ಮತದಾನ ಕ್ಷೇತ್ರಗಳಿಂದ ದೂರ ಹೋಗಿದ್ದಾರೆ. ಘರ್ಷಣೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 
SCROLL FOR NEXT