ನವದೆಹಲಿ : ಪ್ರಧಾನಿ ನರೇಂದ್ರಮೋದಿ ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರ ಪಕ್ಷಗಳ ನಾಯಕರ ವಿರುದ್ಧ ಬೆದರಿಕೆ ಭಾಷೆ ಬಳಸುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತಿತರ ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಪ್ರಧಾನಿಗೆ ಸೂಚನೆ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ನರೇಂದ್ರಮೋದಿ ತಮ್ಮ ಸ್ಥಾನದ ಘನತೆಯನ್ನು ಮರೆತು ಬೆದರಿಸುವ ರೀತಿಯಲ್ಲಿ ಭಾಷೆ ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಇದನ್ನು ಯೋಚಿಸಲು ಆಗದು, ಪ್ರಮುಖ ಪ್ರತಿ ಪಕ್ಷ ನಾಯಕರಿಗೆ ಸಾರ್ವಜನಿಕವಾಗಿಯೇ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಮೇ 6 ರಂದು ಕರ್ನಾಟಕ ಚುನಾವಣಾ ಪ್ರಚಾರದ ವೇಳೆಯಲ್ಲಿ ನರೇಂದ್ರಮೋದಿ ಬಳಸಿರುವ ಭಾಷೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ನಾಯಕರೇ ಎಚ್ಚರಿಕೆಯಿಂದ ಕೇಳಿ, ನಿಮ್ಮ ಮಿತಿಯನ್ನು ಮೀರಿದ್ದರೆ, ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಮೋದಿ ಹೇಳಿದ್ದರು.
ಚುನಾವಣಾ ಪ್ರಚಾರದ ವೇಳೆಯಲ್ಲಿ ಪ್ರಧಾನಿ ಭೀತಿಯ ಭಾಷೆ ಬಳಸುತ್ತಾರೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ವೈಯಕ್ತಿಕ ಮತ್ತು ರಾಜಕೀಯ ಸೇಡಿಗಾಗಿ ಅವರ ಅಧಿಕಾರ ಮತ್ತು ಸವಲತ್ತುಗಳನ್ನು ಪ್ರಧಾನಮಂತ್ರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
"ಇದು ಸಾಂವಿಧಾನಿಕವಾಗಿ ಆಡಳಿತ ಹೊಂದಿದ ಪ್ರಜಾಪ್ರಭುತ್ವದ ದೇಶವಾದ 1.3 ಶತಕೋಟಿ ಜನರ ಭಾಷೆಯಾಗಲು ಸಾಧ್ಯವಿಲ್ಲ" . ಇದು ಒಪ್ಪಿಕೊಳ್ಳಗಾದ ನಡವಳಿಕೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.