ದೇಶ

ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಓಡಾಟ: ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ

Manjula VN
ಜಮ್ಮು; ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪಟ ಓಡಾಟಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ. 
ಮೇ.19 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಅಹಿತಕರ ಘಟನೆಗಳನ್ನು ಸೃಷ್ಟಿಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. 
ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕತುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಗುಂಪೊಂದು ಶಂಕಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಾಗಿ ಮಾಹಿತಿಗಳು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಜಮ್ಮುಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಕತುವಾ, ಸಾಂಬಾ, ಜಮ್ಮು ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕತುವಾ ಜಿಲ್ಲೆಯ ತರ್ನಾಹ್ ಅಲ್ಲಾಹ್ ಪ್ರದೇಶದಲ್ಲಿ ಶಂಕಿತ ಉಗ್ರರ ಓಡಾಟಗಳು ಕಂಡು ಬಂದ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. 
ಲೊಂಡಿ-ಬೊಬ್ಬಿಯಾನ್ ಪ್ರದೇಶದಲ್ಲಿರುವ ತರ್ನಾಹ್ ಅಲ್ಲಾಹ್ ಎಂಬ ಪ್ರದೇಶದ ಮೂಲಕ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು 3-4 ಉಗ್ರರು ಸತತ ಯತ್ನಗಳನ್ನು ನಡಸುತ್ತಿರುವುದಾಗಿ ವರದಿಗಳು ತಿಳಿಸಿವೆ. 
ಉಗ್ರರ ಶಂಕಾಸ್ಪದ ಓಡಾಟ ಹಿನ್ನಲೆಯಲ್ಲಿ ಚೆಕ್ ಪೋಸ್ಟ್ ಗಳ ಬಳಿ ಪೊಲೀಸರು ಹಾಗೂ ಭದ್ರತಾ ಪಡೆಗಳನ್ನು ಹೆಚ್ಚಿಸಲಾಗಿದ್ದು, ಗಡಿ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 
SCROLL FOR NEXT