ಕೋಲ್ಕತಾ: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿದಿದ್ದರೆ ಇಂದಿನ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವದಲ್ಲೇ ಮೈತ್ರಿ ಮಾಡಿಕೊಂಡಿದ್ದರೆ ಈ ಫಲಿತಾಂಶವೇ ಬೇರೆಯಾಗಿರುತ್ತಿತ್ತು, ಸೋತವರು ಮತ್ತೆ ಮೇಲೆದ್ದು ಗೆಲುವಿಗಾಗಿ ಹೋರಾಡಿ, ಗೆದ್ದವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಕೇಂದ್ರದ ಎನ್ ಡಿಎ ಮೈತ್ರಿಕೂಟದ ವಿರುದ್ಧ ತೊಡೆ ತಟ್ಟಿ ನಿಂತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಕೋಮುವಾದಿ ಬಿಜೆಪಿಯನ್ನು ನಿಯಂತ್ರಿಸಲು ಜಾತ್ಯಾತೀತ ಪಕ್ಷಗಳಗೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ಹೇಳಿದ್ದರು.
ಇದೇ ವೇಳೆ ತಮ್ಮ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನವನ್ನು ನೆನಪಿಸಿಕೊಂಡ ಮಮತಾ, 2011ರ ಇದೇ ದಿನ ಟಿಎಂಸಿ ಸಿಪಿಎಂ ಪಕ್ಷದ 34 ವರ್ಷಗಳ ಸರ್ವಾಧಿಕಾರವನ್ನು ಕೊನೆಗಾಣಿಸಿ ಪ್ರಜಾಪ್ರಭುತ್ವ ಸ್ಥಾಪನೆ ಮಾಡಿತ್ತು. ಇದಕ್ಕಾಗಿ ನಾನು ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಬಿಜೆಪಿ ಅತಿದೊಡ್ಡ ಪಕ್ಷವಾಗುವುದರತ್ತ ಮುನ್ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics