ದೇಶ

ಗೋವಾದಲ್ಲಿ ಸರ್ಕಾರ ರಚನೆ ಹಕ್ಕು ಮಂಡಿಸಲು ಮುಂದಾದ ಕಾಂಗ್ರೆಸ್

Nagaraja AB

ಪಣಜಿ : ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ರಚನೆ ಉದಾಹರಣೆ ಇಟ್ಟುಕೊಂಡು ಗೋವಾದಲ್ಲಿಯೂ ಕಾಂಗ್ರೆಸ್  ಸರ್ಕಾರ ರಚಿಸಲು ನಿರ್ಧರಿಸಿದೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

16 ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲ ಮೃದುಳಾ ಸಿನ್ಹಾ ಅವರಿಗೆ ನಾಳೆ ನೀಡುವ ಮೂಲಕ  ಕಾಂಗ್ರೆಸ್ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗುವುದು ಎಂದು ಗೋವಾ ಕಾಂಗ್ರೆಸ್ ಶಾಸಕಾಂಗ ಸಭೆ ನಾಯಕ ಚಂದ್ರಕಾಂತ್ ಕಾವ್ಳೇಕರ್  ಹೇಳಿದ್ದಾರೆ.

 40  ಸದಸ್ಯ ಬಲದ ಗೋವಾ ವಿಧಾನಸಭೆಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಬಹುಮತ ಪಡೆಯಲು ನಾಲ್ಕು ಸ್ಥಾನಗಳ ಕೊರತೆ ಉಂಟಾಗಿತ್ತು. 14  ಸ್ಥಾನಗಳನ್ನು ಪಡೆದಿದ್ದ ಬಿಜೆಪಿ,  ಗೋವಾ ಫರ್ವಡ್ ಪಾರ್ಟಿ ಮತ್ತು ಎಂಜಿಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು.

 ಗೋವಾ ರಾಜ್ಯಪಾಲರು ಕರ್ನಾಟಕ ರಾಜ್ಯಪಾಲರ ನಿರ್ದೇಶನ ಪಾಲಿಸಬೇಕು, 2017 ರಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು  ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕೆಂದು ಕಾವ್ಳೇಕರ್ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ 16 ಮಂದಿ ಶಾಸಕರಿದ್ದು, ಗೋವಾ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಕರ್ನಾಟಕ ರಾಜ್ಯಪಾಲರ ನಿರ್ಧಾರದಂತೆ ಗೋವಾ ರಾಜ್ಯಪಾಲರು ನಿರ್ಧಾರ ಕೈಗೊಂಡು ಕಾಂಗ್ರೆಸ್ ಸರ್ಕಾರ ರಚನೆಗೆ ಆಹ್ವಾನಿಸಬೇಕು,ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವುದಾಗಿ  ಅವರು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಎರಡೆರಡು ನಿಯಮಗಳಿರುವುದಿಲ್ಲ , ಕರ್ನಾಟಕ ರಾಜ್ಯಪಾಲರು ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವಂತೆ  ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ರಚನೆಗೆ ಆಹ್ವಾನಿಸಬೇಕೆಂದು ಗೋವಾ  ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೊಡನ್ ಕರ್ ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್ ಫರಿಕ್ಕರ್ ಕಳೆದೆರಡು ತಿಂಗಳಿನಿಂದ  ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸರ್ಕಾರವೇ ಇಲ್ಲದಂತಾಗಿದೆ. ಗೋವಾದಲ್ಲಿ ಸ್ಥಿರ ಸರ್ಕಾರ ಒದಗಿಸಲು ಕಾಂಗ್ರೆಸ್ ಸಿದ್ದವಿದೆ ಎಂದು ಕಾವ್ಳೇಕರ್ ಹೇಳಿದ್ದಾರೆ.



SCROLL FOR NEXT