ತಿರುಮಲ: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹಾಗೂ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಡಾ. ಎ.ವಿ. ರಮಣ ದೀಕ್ಷಿತುಲು ಅವರ ನಡುವಿನ ವಿವಾದ ಹೊಸ ತಿರುವು ಪಡೆದಿದ್ದು, ಆಗಮ ಶಾಸ್ತ್ರಗಳಲ್ಲಿ ತಿಮ್ಮಪ್ಪನ ಚಿನ್ನಾಭಾರಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿದ್ದರೆ, ಪ್ರದರ್ಶಿಸಲು ಸಿದ್ಧ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಅವರು ಹೇಳಿದ್ದಾರೆ.
ಕಳೆದ 22ವರ್ಷಗಳಿಂದ ಚಿನ್ನಾಭರಣ ಮತ್ತು ಅಮೂಲ್ಯ ರತ್ನಗಳು ನಾಪತ್ತೆಯಾಗುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ದೀಕ್ಷಿತುಲು ಒತ್ತಾಯಿಸಿದ್ದು, ಈ ಬಗ್ಗೆ ಪ್ರಕಟಣೆ ನೀಡಿರುವ ಟಿಟಿಡಿ ತಾನು ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಿದ್ಧ ಎಂದು ಹೇಳಿದೆ.
ಒಂದು ವೇಳೆ ಆಗಮ ಶಾಸ್ತ್ರದ ಪ್ರಕಾರ ತಿಮ್ಮಪ್ಪನ ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿಲ್ಲದಿದ್ದರೆ, ಅವುಗಳನ್ನು 3ಡಿ ಫಾರ್ಮೆಟ್ ನಲ್ಲಿ ಚಿತ್ರೀಕರಿಸಿ ವಿಡಿಯೋ ಬಿಡುಗಡೆ ಮಾಡುತ್ತೇವೆ ಮತ್ತು ಅದರ ಫೋಟೋಗಳನ್ನು ಮ್ಯೂಸಿಯಂ ಹಾಕಲಾಗುವುದು ಎಂದು ಸಿಂಘಾಲ್ ಅವರು ತಿಳಿಸಿದ್ದಾರೆ.
ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂಬ ದೀಕ್ಷಿತುಲು ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಂಘಾಲ್, ದೇವಸ್ಥಾನದ ಎಲ್ಲಾ ಆಭರಣಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಟಿಟಿಡಿ ಉದ್ಯೋಗಿಗಳು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಈ ರೀತಿ ಆಧಾರ ರಹಿತ ಆರೋಪ ಮಾಡುವುದರಿಂದ ನೋವಾಗುತ್ತದೆ ಎಂದಿದ್ದಾರೆ.
ಟಿಟಿಡಿ ನೂತನ ಮುಖ್ಯಸ್ಥ ಪುತ್ತಾ ಸುಧಾಕರ್ ಯಾದವ್ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ, ಇತರೆ ನಿರ್ಣಯಗಳ ಜತೆಗೆ 65 ವರ್ಷ ಮೀರಿದ ಅರ್ಚಕರನ್ನು ತಕ್ಷಣವೇ ಸೇವೆಯಿಂದ ನಿವೃತ್ತಿಗೊಳಿಸುವ ನಿರ್ಣಯಕ್ಕೂ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಡಾ. ಎ.ವಿ. ರಮಣ ದೀಕ್ಷಿತುಲು ಜತೆಗೆ ನರಸಿಂಹ ದೀಕ್ಷಿತುಲು, ಶ್ರೀನಿವಾಸ ಮೂರ್ತಿ ದೀಕ್ಷಿತುಲು ಸಹ ನಿವೃತ್ತರಾಗಿದ್ದಾರೆ.
ಆದರೆ ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಗುರಿ ಮಾಡಲಾಗಿದೆ. ಟಿಟಿಡಿ ನಿರ್ಣಯ ರದ್ದುಮಾಡುವಂತೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಡಾ. ಎ.ವಿ. ರಮಣ ದೀಕ್ಷಿತುಲು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos