ಬೆಂಗಳೂರು: ಹೊಸದಾಗಿ ಖರೀದಿಸಿದ ವಾಷಿಂಗ್ ಮಷೀನ್ ನಲ್ಲಿ ಒಗೆದ ಶರ್ಟ್ ಗಳಲ್ಲಿ ತೂತು ಬಿದ್ದಿದೆ ಎಂದು ಆರೋಪಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ವಾಷಿಂಗ್ ಮಷೀನ್ ತಯಾರಕ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನ ಶಶಿ ಕುಮಾರ್ ಎಂಬುವವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಗ್ರಾಹಕರ ಪರವಾದ ತೀರ್ಪು ನೀಡಿದ್ದು, ವಾಷಿಂಗ್ ಮಷೀನ್ ನ್ನು ದುರಸ್ತಿಗೊಳಿಸಬೇಕು ಇಲ್ಲವೇ ಹಣವನ್ನು ಮರುಪಾವತಿ ಮಾಡಬೇಕೆಂದು ಸಂಸ್ಥೆಗೆ ಸೂಚಿಸಿದೆ.
2014 ರ ಏ.7 ರಂದು ಶಶಿ ಕುಮಾರ್ ಇಂದಿರಾನಗರದ ಹೋಂ ಅಪ್ಲೇಯನ್ಸ್ ನಿಂದ ಫ್ರಂಟ್ ಲೋಡ್ ವಾಷಿಂಗ್ ಮಷೀನ್ ಖರೀದಿಸಿದ್ದರು, ಈ ಮಷೀನ್ ನಲ್ಲಿ ಒಗೆದ ಬಟ್ಟೆಗಳಲ್ಲಿ ಸಣ್ಣ ಸಣ್ಣ ತೂತಾಗಿರುವುದನ್ನು ಗಮನಕ್ಕೆ ಬಂದಿತ್ತು, ಆದರಂಭದಲ್ಲಿ ಇದನ್ನು ನಿರ್ಲಕ್ಷಿಸದ್ದರಾದರೂ ತೂತುಗಳು ದೊಡ್ಡದಾಯಿತು. ವಾರೆಂಟಿ ಅವಧಿಯಲ್ಲೇ ವಾಷಿಂಗ್ ಮಷೀನ್ ನಲ್ಲಿ ದೋಷವಿರುವುದು ಪತ್ತೆಯಾಗಿದೆ. 2015 ರ ಜೂ.9 ರಂದು ಸಂಸ್ಥೆಯ ಗ್ರಾಹಕರ ಸೇವೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಆದರೆ ಸಂಸಥೆಯ ತಂತ್ರಜ್ಞರು ನೀಡಿದ ಸಲಹೆಗಳನ್ನು ಪಾಲಿಸಿದ ಬಳಿಕವೂ ಸಮಸ್ಯೆ ಮುಂದುವರೆದಿದೆ. ಮತ್ತೊಂದು ದೂರು ನೀಡಿದ ಬಳಿಕ ಸಂಸ್ಥೆ ಬೇರೊಂದು ಮಷೀನ್ ನ್ನು ನೀಡುವುದಾಗಿ ಅಥವಾ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿತ್ತು. ಆದರೆ ನಂತರ ಮಷೀನ್ ನ್ನು ಕಾರ್ಖಾನೆಗೇ ತಂದು ಪರೀಕ್ಷೆ ಮಾಡಬೇಕೆಂದು ಸಂಸ್ಥೆ ಶಶಿ ಕುಮಾರ್ ಗೆ ಇ-ಮೇಲ್ ಕಳಿಸಿತ್ತು. ಶಶಿ ಕುಮಾರ್ ಅವರ ಬೇಡಿಕೆಗಳನ್ನು ಪರಿಗಣಿಸಲೂ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಗ್ರಾಹಕನಿಗೆ 32 ತಿಂಗಳ ಕಾನೂನು ಹೋರಾಟದ ನಂತರ ನ್ಯಾಯ ದೊರೆತಿದೆ.