ದೇಶ

ಜಮ್ಮು-ಕಾಶ್ಮೀರ; ಕದನ ವಿರಾಮ ಉಲ್ಲಂಘಿಸಿದ ಪಾಕ್; ಸೇನೆ ಗುರಿಯಾಗಿರಿಸಿ ಅಪ್ರಚೋದಿತ ಗುಂಡಿನ ದಾಳಿ

Manjula VN
ಅರ್ನಿಯಾ; ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದ್ದು, ಗಡಿಯಲ್ಲಿದ್ದ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 
ಮೇ.18 ರಂದೂ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಆರ್.ಎಸ್ ಪುರ ಮತ್ತು ಅರ್ನಿಯಾ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ಬಿಎಸ್ಎಫ್ ಯೋಧ ಸೇರಿ ನಾಲ್ವರು ನಾಗರೀಕರನ್ನು ಬಲಿ ಪಡೆದುಕೊಂಡಿದ್ದರು. 
ರಂಜಾನ್ ತಿಂಗಳ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕದನ ವಿರಾಮಕ್ಕೆ ಕರೆ ನೀಡಿತ್ತು. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಪಾಕಿಸ್ತಾನ ಸೇನೆ ಗಡಿಯಲ್ಲಿ ತನ್ನ ಉದ್ಧಟತನವನ್ನು ಪ್ರದರ್ಶಿಸಿತ್ತು. 
ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನೇ ಕಲಿಸಿತ್ತು, ಮೇ.19ರಂದು ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ 4 ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. ಇದಕ್ಕೆ ಬೆದರಿದ ಪಾಕಿಸ್ತಾನ, ಶಾಂತಿ ಕಾಪಾಡಲು ಬದ್ಧವಾಗಿದ್ದು, ದಾಳಿ ನಡೆಸದಂತೆ ಮನವಿ ಮಾಡಿಕೊಂಡಿತ್ತು. ಇದೀಗ ಮತ್ತೆ ತನ್ನ ಪುಂಡಾಟವನ್ನು ಆರಂಭಿಸಿದೆ. 
SCROLL FOR NEXT