ಭುವನೇಶ್ವರ್(ಒಡಿಶಾ): ತೈಲ ಬೆಲೆ ಏರಿಕೆಯನ್ನು ನಿಬಾಯಿಸಲು ಕೇಂದ್ರ ಸರ್ಕಾರವು "ತುರ್ತು ಪರಿಹಾರ ಕ್ರಮ" ದ ಕುರಿತಂತೆ ಚರ್ಚಿಸಿದೆ ಎಂದು ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
"ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ತಗ್ಗಿಸಲು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ತರಲು ತೈಲ ಸಚಿವಾಲಯವು ಬಯಸಿದೆ. ಸಮಸ್ಯೆಯ ತಕ್ಷಣದ ಪರಿಹಾರದ ಸಂಬಂಧ ಚರ್ಚೆ ನಡೆದಿದೆ ಎಂದು ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಣಾವು ಖಂಡಿತವಾಗಿ ಉತ್ತಮ ಮಾರ್ಗವನ್ನೇ ಕಂಡುಕೊಳ್ಳಲಿದ್ದೇವೆ"ಅವರು ಹೇಳಿದರು.
ದೇಶದ ಬಡಜನತೆಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್ ನಲ್ಲಿ ಇಂಧನದ ಮೇಲೆ ಪ್ರತಿ ಲೀಟರ್ ಗೆ 2 ರೂಪಾಯಿಗಳಷ್ಟು ಎಕ್ಸೈಸ್ ಸುಂಕವನ್ನು ಕಡಿತಗೊಳಿಸಿತ್ತು. ಈ ಸಮಯದಲ್ಲಿ ಕೇಂದ್ರವು ಕ್ಷಿಪ್ರ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ.
"ಎರಡು ತೈಲ ಉತ್ಪಾದನಾ ದೇಶಗಳಾದ ಇರಾನ್ ಮತ್ತು ವೆನೆಜುವೆಲಾದ ನಡುವಿನ ರಾಜಕೀಯ ವೈರುದ್ಯವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಳದ ಹಿಂದಿನ ಪ್ರಮುಖ ಕಾರಣವಾಗಿದೆ" ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಕಾರಣ ಕುರಿತ ಪ್ರಶ್ನೆಗೆ ಪ್ರಧಾನ್ ಉತ್ತರಿಸಿದ್ದಾರೆ.
ಒಡಿಶಾ ಹಣಕಾಸು ಸಚಿವರಾದ ಎಸ್.ಬಿ. ಬೆಹೇರಾ ಕೇಂದ್ರ ಸಚಿವರನ್ನು ಟೀಕಿಸುತ್ತಾ "ಕೇಂದ್ರವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ" ಎಂದಿದ್ದರು.
"ಕೇಂದ್ರ ತೈಲ ಸಚಿವರು ಸಮಸ್ಯೆಗೆ ನೀಡುವ ಕಾರಣಗಳು ಸಮರ್ಥನೀಯವಲ್ಲ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರದ ವಿಫಲತೆಯನ್ನು ಮುಚ್ಚಿಹಾಕುವ ಸಲುವಾಗಿ ಅವರು ಹೀಗೆ ಹೇಳುತ್ತಿದ್ದಾರೆ.ಕೇಂದ್ರವು ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತನ್ನಿಂದ ತಾನು ಕೆಳಗಿಳಿಯಲಿದೆ" ಎಂದು ಅವರು ಹೇಳಿದರು.
ಜಿಎಸ್ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಕುರಿತಂತೆ ಪ್ರಧಾನ್ ಸಲಹೆಗೆ ಪ್ರತಿಕ್ರಯಿಸಿದ ಸಚಿವ ಬೆಹೇರಾ "ಜಿಎಸ್ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಲಿವೆ. ಆದರೆ ಆ ನೆಪದಲ್ಲಿ ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸಾಧ್ಯವಿಲ್ಲ." ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos