ಜಮ್ಮು-ಕಾಶ್ಮೀರ : ಕೇಂದ್ರಸರ್ಕಾರ ಜಮ್ಮು -ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಒಂದು ವಾರದ ಹಿಂದೆ ಅಮಾನತ್ತುಪಡಿಸಿದ ನಂತರ ಕಲ್ಲು ತೂರಾಟ ಪ್ರಕರಣದಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 16ರಿಂದ 23 ರವರೆಗೂ ಕೇವಲ 16 ಕಲ್ಲು ತೂರಾಟ ಪ್ರಕರಣಗಳ ಬಗ್ಗೆ ವರದಿಯಾಗಿವೆ. ಇದಕ್ಕೆ ಹೋಲಿಸಿದ್ದರೆ ಮೇ 8-15ರ ಅವಧಿಯಲ್ಲಿ ಇಂತಹ 38 ಪ್ರಕರಣಗಳು ವರದಿಯಾಗಿದ್ದವು.
ಮೇ 16ರಿಂದ 23 ವರೆಗೆ ಶ್ರೀನಗರದಲ್ಲಿ 7, ಅನಂತ್ ನಾಗ್ ನಲ್ಲಿ 3, ಬುದ್ ಗಾಂ ಹಾಗೂ ಶೊಫಿಯಾನ್ ನಲ್ಲಿ ತಲಾ 2, ಬಂಡಿಪೊರ್ , ಬಾರಮುಲ್ಲಾದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.
ಮೇ 8ರಿಂದ 15 ರವರೆಗೆ ಶ್ರೀನಗರದಲ್ಲಿ 13, ಶೊಫಿಯಾನ್ ನಲ್ಲಿ 8, ಪುಲ್ವಾಮಾದಲ್ಲಿ 6, ಕುಪ್ವಾರದಲ್ಲಿ 4, ಅನಂತ್ ನಾಗ್ ನಲ್ಲಿ 2, ಬಂಡಿಪೊರ್ ಹಾಗೂ ಬುದ್ ಗಾಂನಲ್ಲಿ ತಲಾ 2 ಹಾಗೂ ಗಂಡೇರ್ಬಲ್ ನಲ್ಲಿ 1 ಪ್ರಕರಣಗಳು ದಾಖಲಾಗಿದ್ದವು.
ರಂಜಾನ್ ಕದನ ವಿರಾಮ ಯಶಸ್ವಿಯಾಗಲಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಪಿ. ವಾಯಿದ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ನೆಲೆಸಲು ಪ್ರಧಾನಿ ನರೇಂದ್ರಮೋದಿ ನೆರವಾಗಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಶಾಲೆಗೆ ಹೋದ ಮಕ್ಕಳು ಮರಳಿ ಮನೆಗೆ ಬರುವಂತಾಗಿದೆ ಎಂಬ ವಿಶ್ವಾಸ ಪೋಷಕರಲ್ಲಿ ಮೂಡುವಂತಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಟ್ವೀಟರ್ ನಲ್ಲಿ ಹೇಳಿದ್ದಾರೆ.
ಪವಿತ್ರ ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಯಾವುದೇ ರೀತಿಯ ಕಾರ್ಯಾಚರಣೆ ನಡೆಸದಂತೆ ಕೇಂದ್ರ ಗೃಹ ಸಚಿವಾಲಯ ಮೇ 16 ರಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಜಮ್ಮು-ಕಾಶ್ನೀರದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.