ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್‌ನಲ್ಲಿ ಪಾಕ್ ಮೂಲದ ಭಯೋತ್ಪಾದಕ ಮಸೂದ್ ಅಜರ್ ಸೋದರಳಿಯ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ಈ ಬಗ್ಗೆ ಸ್ವತಃ ಜೈಷ್ ಉಗ್ರಸಂಘಟನೆಯ ಮುಖ್ಯಸ್ಥ ಹಾಗೂ ಕಾಂದಹಾರ್ ವಿಮಾನ ಅಪಹರಣ ಮಾಸ್ಟರ್ ಮೈಂಡ್ ಹೇಳಿಕೊಂಡಿದ್ದು, ಈ ಕುರಿತು ಆಡಿಯೋ ರೆಕಾರ್ಡ್ ವೊಂದು ಬಿಡುಗಡೆಯಾಗಿದೆ. ಆಡಿಯೋದಲ್ಲಿ ಮಸೂದ್ ಅಜರ್ ತನ್ನ ಅಳಿಯ ಉಸ್ಮಾನ್ ಇಬ್ರಾಹಿಂ ವೀರಮರಣವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದು, ನನ್ನ ಪ್ರೀತಿಯ ಸೋದರಳಿಯ ಹಾಗೂ ಕಾಶ್ಮೀರಿ ಹೋರಾಟಗಾರರಾದ ಶೌಕತ್ ಅಹ್ಮದ್ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಜನ ಸೇರಿ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಮನವಿ ಮಾಡಿದ್ದಾನೆ.
ಅಂತೆಯೇ ಭಾರತೀಯ ಸೇನೆ ಹಾಗೂ ಭಾರತ ಸರ್ಕಾರವನ್ನು ಟೀಕಿಸಿರುವ ಮಸೂದ್ ಅಜರ್ ಕಾಶ್ಮೀರವನ್ನು ತನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿರುವ ಭಾರತಕ್ಕೆ ನಾಚಿಕೆಯಾಗಬೇಕು. ಕಾಶ್ಮೀರಕ್ಕೆ ಉಸ್ಮಾನ್ ಪ್ರವೇಶ ಅತಿಕ್ರಮಣವಲ್ಲ. ಕಾಶ್ಮೀರಕ್ಕೆ ಭಾರತೀಯ ಸೇನೆ ಪ್ರವೇಶ ಮಾಡಿರುವುದು ಅತಿಕ್ರಮಣವಾಗಿದೆ. ಹೀಗಾಗಿ ಇಡೀ ಜಮ್ಮು ಮತ್ತು ಕಾಶ್ಮೀರ ಒಗ್ಗೂಡಿ ಇದರ ವಿರುದ್ಧ ಹೋರಾಡಬೇಕು, ಜಿಹಾದ್ ಘೋಷಿಸಬೇಕು. ನಿಮ್ಮದೇ ಜಾಗದಲ್ಲಿ ಭಾರತ ನಿಮ್ಮನ್ನು ಒತ್ತೆಯಾಳುಗಳಂತೆ ಜೀವಿಸುವಂತೆ ಮಾಡುತ್ತಿದೆ. ಎಷ್ಟುದಿನ ನೀವು ಹೇಡಿಗಳಂತೆ ಬದುಕುತ್ತೀರಿ.. ನೀವು ಒಗ್ಗೂಡಿ ಭಾರತದ ಯೋಜನೆಗಳನ್ನು ಬುಡಮೇಲು ಮಾಡಬೇಕು ಎಂದು ಆಗ್ರಹಿಸಿದ್ದಾನೆ.
ಇನ್ನು ಇಂದಿನ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಯೋಧ ವ್ರಹ್ಮಾ ಪಾಲ್ ಸಿಂಗ್ ಅವರು ಕೂಡ ಹುತಾತ್ಮರಾಗಿದ್ದಾರೆ.