ದೇಶ

ಮದುವೆಯಾದ ಆರೇ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ; ತೇಜ್ ಪ್ರತಾಪ್ ನೀಡಿದ ಕಾರಣವೇನು?

Sumana Upadhyaya

ಪಾಟ್ನಾ: ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಇತ್ತ ಜೈಲು ಸೇರಿದ್ದರೆ ಅತ್ತ ಅವರ ಮನೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಪತ್ನಿ ಐಶ್ವರ್ಯಾ ರಾಯ್ ಗೆ ವಿಚ್ಛೇದನ ನೀಡುವ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಕೆಲವರು ರಾಜಕೀಯ ಲಾಭ ಪಡೆದುಕೊಳ್ಳಲು ತಮಗೆ ಹಿರಿಯರು ಕೂಡಿ ನಿಶ್ಚಿತಾರ್ಥ ಮಾಡಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಂತದಲ್ಲಿ ನನಗೆ ಮದುವೆಯಾಗಲು ಒಂಚೂರು ಇಷ್ಟವಿರಲಿಲ್ಲ. ಆದರೆ ನನ್ನನ್ನು ಬಲಿಪಶು ಮಾಡಲಾಯಿತು. ಹಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹಲವು ವಿಷಯಗಳನ್ನು ಮಾಡುತ್ತಾರೆ. ನನ್ನ ವಿರುದ್ಧ ಪಿತೂರಿ ನಡೆಸಿ ಬಲಿಪಶುವನ್ನಾಗಿ ಮಾಡಿದರು. ಈ ಹಂತದಲ್ಲಿ ಮದುವೆಯಾಗಲು ಇಷ್ಟವಿರದ ನನ್ನ ಬಯಕೆಯನ್ನು ನನ್ನ ಸೋದರಿ ಕೂಡ ಬೆಂಬಲಿಸಿದಳು. ಆದರೆ ಕೆಲವರು ನನ್ನ ಪೋಷಕರನ್ನು ನನಗೆ ಮದುವೆ ಮಾಡಿಸಲು ಒತ್ತಾಯಿಸಿದರು ಎಂದು 30 ವರ್ಷ ಹರೆಯದ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

ಶಾಸಕ ಹಾಗೂ ಮಾಜಿ ಸಚಿವರೂ ಆಗಿದ್ದಾರೆ ತೇಜ್ ಪ್ರತಾಪ್ ಮಾಜಿ ಸಚಿವ ಹಾಗೂ ಆರ್ ಜೆಡಿ ಶಾಸಕ ಚಂದ್ರಿಕಾ ರಾಯ್ ಅವರ ಮಗಳನ್ನು ಕಳೆದ ಮೇ 12ರಂದು ವಿವಾಹವಾಗಿದ್ದರು. ಮದುವೆಯಾದ ಆರೇ ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನಗೆ ಐಶ್ವರ್ಯಾ ಯಾವುದೇ ರೀತಿಯಲ್ಲಿ ಹೊಂದಿಕೆಯಾಗುವುದಿಲ್ಲ. ಅವಳು ದಕ್ಷಿಣ ಧ್ರುವವಾದರೆ ನಾನು ಉತ್ತರ ಧ್ರುವ. ನಮಗೆ ಪದೇ ಪದೇ ನಮ್ಮ ಪೋಷಕರ ಮುಂದೆ ಮತ್ತು ಇತರರ ಮುಂದೆ ಜಗಳವಾಗುತ್ತಿರುತ್ತದೆ. ಆದರೆ ಅವರೆಲ್ಲ ಅದನ್ನು ಅಲಕ್ಷ್ಯ ಮಾಡುತ್ತಿದ್ದಾರೆ.

ನಾನು ತುಂಬಾ ಸರಳ ಧಾರ್ಮಿಕ ವ್ಯಕ್ತಿ. ಇತ್ತೀಚೆಗೆ ವಾರಣಾಸಿಗೆ ಹೋಗಿದ್ದೆ. ಆದರೆ ಐಶ್ವರ್ಯಾ ಉನ್ನತ ವರ್ಗದಿಂದ ಬಂದವಳು. ಮಿರಾಂಡಾ ಹೌಸ್ ಕಾಲೇಜು, ಅಮಿಟಾ ಯೂನಿವರ್ಸಿಟಿ ಮತ್ತು ಬಿಎನ್ ಕಾಲೇಜಿನಲ್ಲಿ ಓದಿದವಳು. ನನ್ನ ಮೇಲೆ ಕೆಲವರು ನಡೆಸಿದ ಪಿತೂರಿಯಿಂದ ನಾನು ಬಲಿಪಶುವಾದೆ.ನಾನು ಓದಿದ್ದು ಕೇವಲ ಪಿಯುಸಿವರೆಗೆ ಮಾತ್ರ, ರಾಜಕೀಯಕ್ಕೆ ಸೇರುವ ಮೊದಲು ಬೈಕ್ ಶೋರೂಂ ನಡೆಸುತ್ತಿದ್ದೆ ಎಂದು ತೇಜ್ ಪ್ರತಾಪ್ ಸುದ್ದಿಗಾರರಿಗೆ ಹೇಳಿದ್ದಾರೆ.

ಮುಂದುವರಿದು ತೇಜ್ ಪ್ರತಾಪ್, ನಮ್ಮ ಮಧ್ಯೆ ಜಗಳವಾದಾಗ, ಅವಳೇ ವಿಚ್ಛೇದನ ನೀಡುವಂತೆ ಹೇಳಿದಳು, ನನ್ನ ತಂದೆಯ ಎದುರೇ ಹೇಳಿದ್ದಾಳೆ, ಈ ಬಗ್ಗೆ ನಂತರ ನಾನು ತಂದೆಯನ್ನು ದೂರವಾಣಿ ಮೂಲಕ ಕೇಳಿದೆ. ಆದರೆ ನನ್ನ ಪೋಷಕರು ಒಪ್ಪಲಿಲ್ಲ. ನನ್ನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಹೋಗಬಾರದೆಂದು ಅಂದುಕೊಂಡೆ, ಆದರೆ ನನ್ನ ಮನಸ್ಸು ಇಂದು ಚೂರಾಗಿದೆ ಎಂದಿದ್ದಾರೆ.

ಐಶ್ವರ್ಯಾಗೆ ವಿಚ್ಛೇದನ ನೀಡುವುದೇ ನನ್ನ ಜೀವನದ ಕೊನೆಯ ಆಶಾಕಿರಣ ಎಂದು ಹೇಳಿರುವ ತೇಜ್ ಪ್ರತಾಪ್, ಸರಿಯಾಗಿ ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದರೂ ಕೂಡ ನಾನು ಮಾತ್ರ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಪ್ರಧಾನಿ ಹೇಳಿದರೂ ಕೂಡ ನನ್ನ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದರು.

ಪಾಟ್ನಾದ ಜೈಲಿನಲ್ಲಿ ತಂದೆ ಲಾಲೂ ಪ್ರಸಾದ್ ಯಾದವ್ ರನ್ನು ಭೇಟಿ ಮಾಡಿ ಬಂದಿರುವ ತೇಜ್ ಪ್ರತಾಪ್, ನನ್ನ ತಂದೆಯ ಆರೋಗ್ಯ ಸರಿ ಇಲ್ಲ. ನಾನು ಬಂದು ಮಾತನಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

ಈ ಬಗ್ಗೆ ತೇಜ್ ಪ್ರತಾಪ್ ತಮ್ಮ ಬಿಹಾರ ಸರ್ಕಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಪ್ರತಿಕ್ರಿಯಿಸಲು ನಿರಾಕಸಿದ್ದಾರೆ. ಇದು ವೈಯಕ್ತಿಕ ವಿಷಯವಾಗಿದ್ದು ಸಾರ್ವಜನಿಕರಿಗೆ ತಿಳಿಯಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

SCROLL FOR NEXT