ನವದೆಹಲಿ: ಈ ಬಾರಿಯೂ ದೇಶ ಕಾಯುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಕೋರಿರುವ ದೀಪಾವಳಿ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿವರ್ಷ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಯೋಧರೊಂದಿಗೆ ಕಾಲ ಕಳೆಯುತ್ತೇನೆ. ಈ ಬಾರಿಯೂ ಸಾಹಸಿ ಯೋಧರೊಂದಿಗೆ ವಿಶೇಷವಾಗಿ ಕಾಲ ಕಳೆಯುವುದಾಗಿ ಹೇಳಿದ್ದಾರೆ.
ದೀಪಾವಳಿ ಶುಭಾಶಯ ಕೋರಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ವಿಶೇಷ ಭೇಟಿಯ ಪೋಟೋಗಳನ್ನು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
2014ರಲ್ಲಿ ಪ್ರಧಾನಿಯಾದ ನಂತರ ನರೇಂದ್ರ ಮೋದಿ, ಸಿಯಾಚಿನ್ ನಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. 2015ರಲ್ಲಿ ಪಂಜಾಬ್ ಗಡಿ ಪ್ರದೇಶದಲ್ಲಿ ದೀಪಾವಳಿ ಆಚರಿಸಿದ್ದರು.
2016ರಲ್ಲಿ ಹಿಮಾಚಲ ಪ್ರದೇಶದ ಇಂಡೋ- ಟಿಬೆಟಿನ್ ಗಡಿ ಪೊಲೀಸರೊಂದಿಗೆ ಕಾಲ ಕಳೆದಿದ್ದ ನರೇಂದ್ರ ಮೋದಿ, 2017ರಲ್ಲಿ ಜಮ್ಮು- ಕಾಶ್ಮೀರದ ಗುರೇಜ್ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.