ದೇಶ

ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ; 3 ದಿನ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧ!

Srinivasamurthy VN
ನವದೆಹಲಿ: ದೀಪಾವಳಿ ಬೆನ್ನಲ್ಲೇ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದೆಹಲಿಗೆ ಸರಕುಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ ಹಾಗೂ ಬುಧವಾರ ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲೀನ್ಯ ಹೆಚ್ಚಾಗಿದ್ದು, ಹೊಗೆ ಜತೆಗೆ ಮಂಜು ಮಿಶ್ರಣವಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಪಟಾಕಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರ ಅನೇಕ ಸೂಚನೆಗಳನ್ನು ನೀಡಿದ್ದರೂ ಸಾರ್ವಜನಿಕರು ಇವುಗಳನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿದ್ದಾರೆ. ಇದರ ಪರಿಣಾಮ ದೆಹಲಿಯಲ್ಲಿ ಹೊಗೆ ಹಾಗೂ ಮಂಜಿನಲ್ಲಿ ಮುಳುಗಿದೆ. ದೆಹಲಿ ಪರಿಸ್ಥಿತಿ ಹದಗೆಟ್ಟಿದ್ದು, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಣಾಮ ಇದೀಗ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಾಜಧಾನಿಗೆ 3ದಿನಗಳ ಕಾಲ ಎಲ್ಲ ಬಗೆಯ ಸರಕು ಸಾಗಾಣಿಕಾ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ತರ್ತು ಆರೋಗ್ಯ ಸೇವೆಗಳು, ಹಾಲು, ನೀರು, ಮೊಟ್ಟೆ, ದವಸ ಧಾನ್ಯಗಳು, ತರಕಾರಿಗಳು ಮುಂತಾದ ಅಗತ್ಯವಸ್ತುಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಪಟಾಕಿ ಸಿಡಿಸಿದವರ ವಿರುದ್ಧ ಎಫ್ಐಆರ್
ಸುಪ್ರೀಂ ಕೋರ್ಟಿನ ಹೊರತಾಗಿಯೂ ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದವರ ಹಾಗೂ ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು 600 ಕೆ.ಜಿಗೂ ಹೆಚ್ಚಿನ ಪಟಾಕಿ ವಶಪಡಿಸಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ದೆಹಲಿಯ ವಾಯುವ್ಯ ಭಾಗದಲ್ಲಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ ಮಾಡುತ್ತಿದ್ದ 57 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 140 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದಾರೆ. ಇನ್ನು ದ್ವಾರಕ ಪ್ರದೇಶದಲ್ಲಿ ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದ 42 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆಗ್ನೇಯ ದೆಹಲಿ ಪೊಲೀಸರು 23 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 17 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ 278 ಕೆ.ಜಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
SCROLL FOR NEXT