ಚೆನ್ನೈ: ತಮಿಳುನಾಡಿನಲ್ಲಿ 'ಗಜ' ಚಂಡಮಾರುತದ ಅಬ್ಬರಕ್ಕೆ ಶುಕ್ರವಾರ 13 ಮಂದಿ ಬಲಿಯಾಗಿದ್ದು, 81 ಸಾವಿರ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರಿಗೆ ಕರೆ ಮಾಡಿ, ಚಂಡಮಾರುತದಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಚಂಡಮಾರುತದಿಂದ ತತ್ತರಿಸಿ ಹೋಗಿರುವ ತಮಿಳುನಾಡಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಾಯ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಇಂದು ಬೆಳಗಿನ ಜಾವವೇ ತಮಿಳುನಾಡಿನ ನಾಗಪಟ್ಟಣಂ ಹಾಗೂ ವೇದಅರಣ್ಯಂ ತಲುಪಿದ 'ಗಜ'ದ ಅಬ್ಬರಕ್ಕೆ ಜನತೆ ನಲುಗಿ ಹೋಗಿದ್ದಾರೆ. ಚಂಡಮಾರುತದಿಂದಾಗಿ ಇದುವರೆಗೆ 10 ಪುರುಷರು ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ.
ತಮಿಳುನಾಡು ನಂತರ ಗಜ ಚಂಡಮಾರುತ ಈಗ ಕೇರಳಕ್ಕೆ ಅಪ್ಪಳಿಸಿದ್ದು, ಇಡುಕ್ಕಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಕಡೆ ಭೂಕುಸಿತ ಉಂಟಾಗಿದೆ.