ದೇಶ

ತಮಿಳುನಾಡಿನ ಕೇಂದ್ರ ಭಾಗದಲ್ಲಿ 'ಗಜ' ಚಂಡಮಾರುತದಿಂದ ವ್ಯಾಪಕ ಹಾನಿ

Sumana Upadhyaya

ನಾಗಪಟ್ಟಣಂ: ಗಜ ಚಂಡಮಾರುತ ನಾಗಪಟ್ಟಣಂ ಮತ್ತು ವೇದಾರಣ್ಯಂನ ಕೊಡಿಯಕರೈಯಲ್ಲಿ ಅಪ್ಪಳಿಸಿ ನಂತರ ಅಪಾರ ಹಾನಿಯನ್ನುಂಟುಮಾಡಿದ್ದು ಈ ಜಿಲ್ಲೆಗಳಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ.

ವೇದರ್ಮನ್ಯಂನಲ್ಲಿ ಇನ್ನೂ ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿರುವ ಸಾಧ್ಯೆತೆಯಿದ್ದು ಸಂವಹನದ ಕೊರತೆಯಿಂದಾಗಿ ಅಧಿಕಾರಿಗಳಿಗೆ ಅಪಾಯಕ್ಕೆ ಸಿಲುಕಿದವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.

ಗಜ ಚಂಡಮಾರುತದ ಆರ್ಭಟಕ್ಕೆ ನಾಗಪಟ್ಟಣಂ, ಕಿಲ್ವೆಲೂರು, ಕೀಜಾಯೂರ್, ತಲೈಯಾಗ್ನೈಯಿರುಗಳಲ್ಲಿ ತೀವ್ರ ಹಾನಿ ಕಂಡಿವೆ. ಹಲವು ಮರಗಳು ಧರೆಗುರುಳಿವೆ. ಮೊಬೈಲ್ ಟವರ್ ಗಳು, ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳು ಮುರಿದು ನೆಲಕ್ಕುರುಳಿದ್ದರಿಂದ ವಿದ್ಯುತ್ ಮತ್ತು ಸಂವಹನ ಸೇವೆಗಳು ಸಂಪೂರ್ಣ ಹಾನಿಗೀಡಾಗಿವೆ
ನಿನ್ನೆ ಮಧ್ಯಾಹ್ನದಿಂದ ಬಸ್ ಸಂಚಾರ ಸೇವೆ ಆರಂಭಗೊಂಡಿದೆ. ರೈಲು ಸೇವೆಯನ್ನು ರದ್ದುಪಡಿಸಲಾಗಿದೆ. ಮೊಬೈಲ್ ಸಂವಹನಗಳು ಇಡೀ ಜಿಲ್ಲೆಯಾದ್ಯಂತ ಸಂಪರ್ಕ ವ್ಯತ್ಯಯವಾಗಿದೆ. ಮೊಬೈಲ್ ಟವರ್ ಗಳಲ್ಲಿ ಆಂಟೆನಾಗಳು ಮುರಿದು ಧರೆಗುರುಳಿವೆ.

ಗಂಟೆಗೆ ಸುಮಾರು 120 ಕಿ.ಮೀ ವೇಗದಲ್ಲಿ ಚಲಿಸಿದ ಚಂಡಮಾರುತ ನಾಗಪಟ್ಟಣಂ ಮತ್ತು ವೇದಾರಣ್ಯಂ ಮಧ್ಯದ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ನಾಗಪಟ್ಟಣಂ, ಕಡಲೂರು, ಪುಡುಕೊಟ್ಟೈ, ಕರೈಕಲ್‌, ಕಡಲೂರು, ರಾಮನಾಥಪುರಂ, ತಿರುವಾರೂರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ರಾಜ್ಯ ಸರಕಾರ ಸಮರೋಪಾದಿಯಲ್ಲಿ ರಕ್ಷಣೆ ಕಾರ್ಯ ಮುಂದುವರಿಸಿದೆ. ಕಡಲು ಕಾವಲು ಪಡೆ, ಎನ್‌ಡಿಆರ್‌ಎಫ್‌ ಪಡೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. 80 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 471 ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರಿಗೆ ನಿನ್ನೆ ದೂರವಾಣಿ ಮೂಲಕ ಕರೆ ಮಾಡಿಹಾನಿಯ ಮಾಹಿತಿ ಪಡೆದರು ಮತ್ತು ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದರು. ಇತ್ತ ಸೇಲಂನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪಳನಿಸ್ವಾಮಿ, ''ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಆದರೆ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರಕಾರ ಅಗತ್ಯ ಹಣಕಾಸಿನ ನೆರವು ನೀಡುತ್ತಿಲ್ಲ,'' ಎಂದು ಆರೋಪಿಸಿದರು.

173 ದೋಣಿಗಳು: ಮೀನುಗಾರಿಕೆಗೆ ತೆರಳಿದ್ದ 173 ಯಾಂತ್ರೀಕೃತ ದೋಣಿಗಳು ಶ್ರೀಲಂಕಾದ ಕಡಲು ತೀರದಲ್ಲಿ ಸಿಲುಕಿವೆ. ಮೀನುಗಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರಕಾರ ಹೇಳಿದೆ.

SCROLL FOR NEXT