ದುಬೈ: ಬಹುಕೋಟಿ ವಿವಿಐಪಿ ಚಾಪರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ, ಮಧ್ಯವರ್ತಿ, ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಗಡಿಪಾರಿಗೆ ದುಬೈ ಕೋರ್ಟ್ ಆದೇಶ ನೀಡಿದೆ.
ದುಬೈ ನಲ್ಲಿ ಬಂಧನಕ್ಕೊಳಗಾಗಿರುವ ಕ್ರಿಶ್ಚಿಯನ್ ಮೈಕೆಲ್ ನ್ನು ಗಡಿಪಾರು ಮಾಡಬಹುದೆಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ದುಬೈ ನ ಉಚ್ಚ ನ್ಯಾಯಾಲಯ ಎತ್ತಿಹಿಡಿದಿದ್ದು ಮೈಕೆಲ್ ನ್ನು ಗಡಿಪಾರು ಮಾಡಬಹುದೆಂದು ಹೇಳಿದೆ.
3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಚಾಪರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಕ್ರಿಶ್ಚಿಯನ್ ಮೈಕೆಲ್ ಗಡಿಪಾರು ಆದೇಶ ಭಾರತಕ್ಕೆ ಸಹಕಾರಿಯಾಗಲಿದೆ. ಗಡಿಪಾರು ಮಾಡುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಮೈಕೆಲ್ ಪರ ವಕೀಲರು ಇಟಾಲಿ ಹಾಗೂ ಸ್ವಿಟ್ಜರ್ಲ್ಯಾಂಡ್ ಕೋರ್ಟ್ ಗಳು ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ನ್ನು ಗಡಿಪಾರು ಮಾಡದಂತೆ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಅಲ್ಲಿನ ನ್ಯಾಯಾಲಯಗಳು ತನ್ನ ಕಕ್ಷಿದಾರನ ವಿರುದ್ಧ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಅಂಶಗಳೂ ಇಲ್ಲವೆಂದು ಹೇಳಿದ್ದನ್ನೂ ದುಬೈ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಜೊತೆಗೆ ಗಡಿಪಾರಿಗಾಗಿ ಸಲ್ಲಿಸಲಾಗಿರುವ ಮನವಿ ಯುಎಇ ಹಾಗೂ ಭಾರತ ನಡುವಿನ ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆಯಾಗಿದೆ, ಗಡಿಪಾರಿಗೆ ಮನವಿ ಮಾಡಬೇಕಾದರೆ ಭಾರತ ಸರಿಯಾದ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದೂ ಮೈಕೆಲ್ ಪರ ವಕೀಲರು ವಾದಿಸಿದ್ದರು.
ಮೈಕೆಲ್ ಪಾಸ್ಪೋರ್ಟ್ ನ್ನು ವಶಕ್ಕೆ ಪಡೆದಿದ್ದ ದುಬೈ ನ ನ್ಯಾಯಾಂಗ ಅಧಿಕಾರಿಗಳು ಸೆ.2 ರಂದು ಆತನನ್ನು ವಾಂಟೆಡ್ ಎಂದು ಘೋಷಿಸಿದ್ದರು. ಈಗ ಭಾರತಕ್ಕೆ ಬೇಕಾಗಿರುವ ಆರೋಪಿಯನ್ನು ದುಬೈ ನ್ಯಾಯಾಲಯ ಗಡಿಪಾರು ಮಾಡಲು ಸೂಚನೆ ನೀಡಿದೆ.