ಟೋಂಕ್: ರಾಜಸ್ತಾನ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸಿದ್ದಾಂತಗಳ ಹೋರಾಟವಾಗಿದೆ ಎಂದು ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.
ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಚಿನ್ ಪೈಲಟ್, ಈ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿಯೇ ಕಾಂಗ್ರೆಸ್ ಅತ್ಯಂತ ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸಾಧನೆ ಜನರಿಗೆ ಗೊತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಅದು ತಿರಸ್ಕರಿಸಲಾಗುತ್ತದೆ. ಬಿಜೆಪಿ ಆಡಳಿತದಿಂದ ರೋಸಿಹೋದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಕಾಯುತ್ತಿದ್ದಾರೆ. ಈ ಚುನಾವಣೆ ಮಹತ್ವದಾಗಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಎದ್ದಿರುವುದಾಗಿ ಸಚಿನ್ ಪೈಲಟ್ ತಿಳಿಸಿದರು.
ಸಚಿನ್ ವಿರುದ್ಧವಾಗಿ ಬಿಜೆಪಿಯಿಂದ ಯೂನಸ್ ಖಾನ್ ಅವರನ್ನು ಕೇಸರಿ ಪಡೆ ಕಣಕ್ಕಿಳಿಸಿದೆ. ಇವರು ಕೂಡಾ ಇಂದು ನಾಮಪತ್ರ ಸಲ್ಲಿಸಿದರು. ಜಾತಿ, ಧರ್ಮದ ಆಧಾರದ ಮೇಲೆ ಟೀಕೆ ಮಾಡುವುದಿಲ್ಲ. ತಾವು ಅನೇಕ ಅಭಿವೃದ್ದಿ ಪರ ಕೆಲಸಗಳನ್ನು ಮಾಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇರುವುದಾಗಿ ಹೇಳಿದರು.