ದೇಶ

ಕೇಜ್ರಿವಾಲ್ ಮೇಲಿನ ದಾಳಿ ಹಿಂದೆ ಬಿಜೆಪಿ ಪಿತೂರಿ- ಎಎಪಿ

Nagaraja AB

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎಸೆತದ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರದ ಪಿತೂರಿ ಅಡಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ದಾಳಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ವಕ್ತಾರರಾದ ರಾಘವ್ ಚಾಡ್ಡಾ ಹಾಗೂ ಸೌರಬ್ ಭಾರಾದ್ವಾಜ್,  ಕೇಂದ್ರಸರ್ಕಾರದಿಂದ ರಕ್ಷಣೆ ಸಿಗುತ್ತದೆ ಎಂಬುದನ್ನು ಅರಿತಿದ್ದ ಸಮಾಜ ವಿರೋಧಿ ದಾಳಿಕೋರರು ಕೇಜ್ರಿವಾಲ್ ಮೇಲೆ ದಾಳಿ ನಡೆಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳಿಗೆ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಪೂರಕ ವಾತವಾರಣವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಮೇಲೆ ದಾಳಿ ನಡೆಸಿದವರ ವಿರುದ್ಧ ಉದ್ದೇಶಪೂರ್ವಕವಾಗಿಯೇ  ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಪೊಲೀಸರಿಂದಲೇ  ರಕ್ಷಣೆ ನೀಡಲಾಗುತ್ತಿದೆ. ದಾಳಿಕೋರ ಕೇಜ್ರಿವಾಲ್ ಕಚೇರಿಗೆ ಹೋಗದಂತೆ ಯಾರೂ ತಡೆದಿಲ್ಲ ಎಂದು ಚಡ್ಡಾ ಆಕ್ರೋಶ ವ್ಯಕ್ತಪಡಿಸಿದರು.

ಸಿಗ್ನೇಚರ್ ಸೇತುವೆ ಉದ್ಘಾಟನಾ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ಬಿಜೆಪಿ ನೇತೃತ್ವದ ಕೇಂದ್ರಸರ್ಕಾರವೇ ಮಾಡಿಸಿದೆ. ಮುಖ್ಯಮಂತ್ರಿಗೆ ರಕ್ಷಣೆ ಇಲ್ಲ ಎಂದ ಮೇಲೆ  ಸಾಮಾನ್ಯ ಜನರು ಹೇಗೆ ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಚಡ್ಡಾ ಪ್ರಶ್ನಿಸಿದರು.

ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ಅನಿಲ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT