ದೇಶ

ಶಬರಿಮಲೆ ದೇವಾಲಯದ ಬಳಿ ಹೋಗಬೇಡಿ: ಬಿಜೆಪಿ ನಾಯಕ ಸುರೇಂದ್ರನ್ ಗೆ ಕೋರ್ಟ್ ಸೂಚನೆ

Srinivas Rao BV
ಶಬರಿಮಲೆ ದೇವಾಲಯದ ವಿಷಯವಾಗಿ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ಸುರೇಂದ್ರನ್ ಸೇರಿ 72 ಜನರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
ಬಿಜೆಪಿ ಪ್ರಧಾನಕಾರ್ಯದರ್ಶಿಯಾಗಿರುವ ಸುರೇಂದ್ರನ್ ಹಾಗೂ ಇನ್ನೂ ಇಬ್ಬರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದರು. ಅವರು ಭೇಟಿ ನೀಡಿದ್ದ ವೇಳೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಪೊಲೀಸರು ಮುಂದುವರೆಯದಂತೆ ಸುರೇಂದ್ರನ್ ಅವರಿಗೆ ಸಲಹೆ ನೀಡಿದ್ದರು. ಪೊಲೀಸ್ ಅಧಿಕಾರಿಗಳ ಸೂಚನೆ ಹೊರತಾಗಿಯೂ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಸುರೇಂದ್ರನ್ ಹಾಗೂ ಇನ್ನೂ ಇಬ್ಬರನ್ನು ನ.18 ರಂದು ನಿಲಕ್ಕಲ್ ಬಳಿ ಬಂಧಿಸಲಾಗಿತ್ತು. 
ಈಗ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ಬಿಜೆಪಿ ನಾಯಕನಿಗೆ ದೇವಾಲಯದ ಬಳಿ ಹೋಗದಂತೆ ಸೂಚನೆ ನೀಡಿದ್ದು  ರಣ್ಣಿ ತಾಲೂಕಿಗೇ ಪ್ರವೇಶಿಸಬಾರದೆಂದು ಹೇಳಿದೆ. ನಿಷೇಧ ಆದೇಶ ಇದ್ದ ಹೊರತಾಗಿಯೂ ದೇವಾಲಯದ ಒಳ ಭಾಗದಲ್ಲಿ ಅಯ್ಯಪ್ಪ ನಾಮಜಪ ಮಾಡುತ್ತಿದ್ದ 69 ಜನರನ್ನು ನಂತರ ಬಂಧಿಸಲಾಗಿತ್ತು.  ಒಟ್ಟಾರೆ 72 ಜನರನ್ನು ಬಂಧಿಸಿರುವ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ 72 ಜನರಿಗೆ ಜಾಮೀನು ಮಂಜೂರು ಮಾಡಿದೆ.  ಇದೇ ವೇಳೆ ಆರೋಪಿಗಳಿಗೆ ಕನಿಷ್ಟ 2 ತಿಂಗಳ ಕಾಲ ದೇವಾಲಯ ಪ್ರವೇಶಿಸದಂತೆ ಕೋರ್ಟ್ ಸೂಚನೆ ನೀಡಿದೆ. 
SCROLL FOR NEXT