ದೇಶ

ಸೆಂಟಿನೆಲ್ ದ್ವೀಪದಲ್ಲಿ ಅಮೆರಿಕ ಪ್ರವಾಸಿಗನ ಸಾವು: ಶವದ ಹುಡುಕಾಟಕ್ಕೆ ಪೊಲೀಸರಿಗೆ ಮಾನವಶಾಸ್ತ್ರಜ್ಞರ ನೆರವು!

Srinivasamurthy VN
ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸೆಂಟಿನೆಲ್ ದ್ವೀಪದಲ್ಲಿ ಬುಡಕಟ್ಟು ಜನಾಂಗದವರಿಂದ ಹತ್ಯೆಗೀಡಾದ ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌನ ಶವದ ಹುಡುಕಾಟ ಕಾರ್ಯಾಚರಣೆಗೆ ಇದೀಗ ಭಾರತದ ಖ್ಯಾತ ಮಾನವಶಾಸ್ತ್ರಜ್ಞರು ಕೈ ಜೋಡಿಸಿದ್ದಾರೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವಾಸಿಗ ಚೌನನ್ನು ಸೆಂಟಿನೆಲ್ ದ್ವೀಪಕ್ಕೆ ಬಿಟ್ಟು ಬಂಧಿತರಾಗಿರುವ ಮೀನುಗಾರರು ಆತನನ್ನು ಕೊಂದು ಕಡಲ ತೀರದಲ್ಲಿ ಮರಳಿನಲ್ಲೇ ಹೂಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಚೌ ಮೃತದೇಹವನ್ನು ಹೊರತೆಗೆಯಲು ಅಂಡಮಾನ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ಖ್ಯಾತ ಮಾನವಶಾಸ್ತ್ರಜ್ಞರ ನೆರವು ಕೂಡ ಪಡೆದಿದ್ದಾರೆ.
ಇನ್ನು ಸೆಂಟಿನೆಲ್ ದ್ವೀಪವನ್ನು ಭಾರತ ಸರ್ಕಾರ ಸಂರಕ್ಷಿತ ವಲಯ ಎಂದು ಘೋಷಣೆ ಮಾಡಿರುವುದರಿಂದ ಇಲ್ಲಿನ ಪ್ರವೇಶಕ್ಕೆ ಸೇನಾಪಡೆಯ ಅನುಮತಿ ಅತ್ಯಗತ್ಯ. ಅಲ್ಲದೆ ಹೊರಗಿನ ಪ್ರಪಂಚದಿಂದ ದೂರ ಉಳಿದಿರುವ ಸೆಂಟಿನೆಲ್ ದ್ವೀಪ ನಿವಾಸಿಗಳು ಅಲ್ಲಿಗೆ ಯಾರೇ ಬಂದರೂ ಅವರ ಮೇಲೆ ಬಿಲ್ಲು ಬಾಣಗಳಿಂದ ದಾಳಿ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶವ ಹೊರ ತೆಗೆಯಲು ಮಾನವ ಶಾಸ್ತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ.
ಈ ಹಿಂದೆ 2004ರಲ್ಲಿ ಸಂಭವಿಸಿದ್ದ ಸುನಾಮಿ ಸಂದರ್ಭದಲ್ಲಿ ಸೇನೆಯ ಹೆಲಿಕಾಪ್ಟರ್ ಇಲ್ಲಿನ ನಿವಾಸಿಗಳ ನೆರವಿಗೆ ತೆರಳಿತ್ತಾದರೂ, ಹೆಲಿಕಾಪ್ಟರ್ ಮೇಲೆ ನಿವಾಸಿಗಳು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ನಲ್ಲಿ ತೆರಳುವ ಯೋಜನೆಯನ್ನು ಮಾನವಶಾಸ್ತ್ರಜ್ಞರು ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ 1991ರಲ್ಲಿ ಮೊಟ್ಟ ಮೊದಲ ಬಾರಿಗೆ ಖ್ಯಾತ ಮಾನವಶಾಸ್ತ್ರಜ್ಞರಾದ ತ್ರಿಲೋಕ ನಾಥ್ ಪಂಡಿತ್ ಅವರು ಇಲ್ಲಿನ ಜನರನ್ನು ಸಂಪರ್ಕಿಸಿದ್ದರು. ಅವರಿಗೆ ತೆಂಗಿನಕಾಯಿಗಳನ್ನು ನೀಡುವ ಮೂಲಕ ಅವರು ದಾಳಿ ಮಾಡದಂತೆ ನೋಡಿಕೊಂಡು ಬೋಟ್ ಮೂಲಕ ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಆಗಿದ್ದರು. ಇದೀಗ ಅದೇ ರೀತಿಯ ಯೋಜನೆಯನ್ನು ಮಾನವಶಾಸ್ತ್ರಜ್ಞರು ರೂಪಿಸುತ್ತಿದ್ದಾರೆ ಎನ್ನಲಾಗಿದೆ.
SCROLL FOR NEXT