ಹಿಂದೂ ಶಕ್ತಿ ಪ್ರದರ್ಶನಕ್ಕೆ ಅಯೋಧ್ಯೆಗೆ ಆಗಮಿಸಿದ ಶಿವಸೇನೆ, ಆರ್'ಎಸ್ಎಸ್ ಕಾರ್ಯಕರ್ತರು: ಸೆಕ್ಷನ್ 144 ಜಾರಿ
ಅಯೋಧ್ಯೆ: ರಾಮಮಂದಿರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವಿಶ್ವ ಹಿಂದೂ ಪರಿಷತ್, ಆರ್'ಎಸ್ಎಸ್, ಶಿವಸೇನೆ ಭಾನುವಾರ ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದು, ಇದರಂತೆ ಈಗಾಗಲೇ ಸಾವಿರಾರು ವಿಹೆಚ್'ಪಿ, ಶಿವಸೇನೆ ಹಾಗೂ ಆರ್'ಎಸ್ಎಸ್ ಕಾರ್ಯಕರ್ತರು ಅಯೋಧ್ಯೆಗೆ ಆಗಮಿಸಿರುವ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಿ, ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.
'ಧರ್ಮ' ಸಭೆ ಹೆಸರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರಾಮಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಶಿವಸೇನೆ ಕೂಡ ರಾಮ ಮಂದಿರಕ್ಕೆ ಅಯೋಧ್ಯೆಯಲ್ಲಿ ಭಾನುವಾರವೇ ಪ್ರತ್ಯೇಕ ರ್ಯಾಲಿ ನಡೆಸುತ್ತಿದೆ.
ಶಿವಸೇನೆ ಕೂಡ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಯತ್ನಿಸುತ್ತಿರುವುದರಿಂದ 1992ರ ಬಾಬ್ರಿ ಮಸೀದಿ ಧ್ವಂಸ ಘಟನೆ ಬಾಳಿಕ ಮೊದಲ ಬಾರಿ ಇಷ್ಟೊಂದು ಜನರನ್ನು ಅಯೋಧಅಯೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ.
ಇದರ ಬೆನ್ನಿಗೇ ಅಯೋಧ್ಯೆ ನಿವಾಸಿಗಳಲ್ಲಿ ಆತಂಕ ಕೂಡ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಭೀತಿಯಿಂದ ಅಯೋಧ್ಯೆಯಲ್ಲಿನ ಹಿಂದೂ-ಮುಸ್ಲಿಮರು ಅಗತ್ಯ ಪಡಿತರ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಕೆಲ ಮುಸ್ಲಿಂ ಯುವಕರು ಈಗಾಗಲೇ ನಗರ ತೊರೆದಿದ್ದಾರೆಂದು ವರದಿಗಳೂ ಕೂಡ ತಿಳಿಸಿವೆ.
ಇದಕ್ಕೆ ಇಂಬು ನೀಡುವಂತೆ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೇ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮುಸ್ಲಿಮರ ಓಣಿ ಸೇರಿದಂತೆ ಹಲವೆಡೆ ಮೆರವಣಿಗೆ ನಡೆಸಿದ್ದಾರೆ.
ಹಿಂಸಾಚಾರ ಭುಗಿಲೇಳುವುದನ್ನು ತಡೆಯುವ ಸಲುವಾಗಿ ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಈ ನಡುವೆ ವಿಹೆಚ್ ಹಾಗೂ ಶಿವಸೇನೆ ಸಮಾವಶಕ್ಕೆ ಅಯೋಧ್ಯೆಯಲ್ಲಿನ ವ್ಯಾಪಾರಿಗಳು ವಿರೋದ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ಕೆಡಿಸಲು ಬರುತ್ತಿರುವ ಈ ನಾಯಕರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆಂದು ಎಚ್ಚರಿಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ವಿವಾದ ಕುರಿತು ವಿಚಾರಣೆಯನ್ನು ಜನವರಿಗೆ ಮುಂದೂಡಿದ ಹಿನ್ನಲೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಕೂಗು ಎದ್ದಿತ್ತು. ಅದರ ಮುಂದುವರೆದ ಭಾಗವಾಗಿ, ರಾಮಮಂದಿರ ನಿರ್ಮಾಣ ಸಂಬಂಧ ಜನ ಬೆಂಬಲ ಕ್ರೋಢೀಕರಿಸಲು ಹಾಗೂ ಸರ್ಕಾರದ ಮೇಲೆ ಒತ್ತರ ಹೇರಲು ವಿಶ್ವ ಹಿಂದೂ ಪರಿಷತ್ ದೇಶದಾದ್ಯಂತ ಧರ್ಮ ಸಭೆಗಳನ್ನು ನಡೆಸಲು ಉದ್ದೇಶಿಸಿದೆ.
ಭಾನುವಾರ ಅಯೋಧ್ಯೆ, ಬೆಂಗಳೂರು ಹಾಗೂ ನಾಗಪುರದಲ್ಲಿ ಈ ಸಮಾವೇಶಗಳು ನಡೆಯಲಿವೆ. ಡಿ.9 ರಂದು ರಾಜಧಾನಿ ದೆಹಲಿಯಲ್ಲಿ ಸಾಧು-ಸಂತರ ಮೆರವಣಿಗೆ ಹಾಗೂ ಧರ್ಮಸಭೆ ಆಯೋಜಿಸಲು ಉದ್ದೇಶಿಸಲಾಗಿದೆ.
ಅಯೋಧ್ಯೆಯಲ್ಲಿ ನಡೆಯುವ ಈ ಕಾರ್ಯಕ್ರಮ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ 1ರಿಂದ 2 ಲಕ್ಷ ರಾಮಭಕ್ತರು ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಟಾಕ್ರೆ ಅಯೋಧ್ಯೆಯತ್ತ ತೆರಳುತ್ತಿದ್ದು, ಧರ್ಮಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಧರ್ಮಸಭೆಗೆ 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ಉದ್ಧವ್ ಠಾಕ್ರೆ ಅಯೋಧ್ಯೆ ತಲುಪಲಿದ್ದು, ಸಾಧು ಸಂತರ ಆಶೀರ್ವಾದ ಪಡೆದು ಲಕ್ಷ್ಮೀ ಖ್ವಿಲಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಭಾನುವಾರ ಬೆಳಿಗ್ಗೆ 9 ಗಂಟೆಗೆ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ರ್ಯಾಲಿಯಲ್ಲಿ ಠಾಕ್ರೆಯವರು ಮೊದಲು ಮಂದಿರ ನಂತರ ಸರ್ಕಾರ ಎಂಬ ಘೋಷಣೆಗಳನ್ನು ಕೂಗಲಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿರುವ ಠಾಕ್ರೆಯವರೊಂದಿಗೆ 400 ಶಿವಸೇನೆ ಸದಸ್ಯರು ಸಾಥ್ ನೀಡಲಿದ್ದಾರೆ. ಈಗಾಗಲೇ ಶಿವಸೇನೆ ಕಾರ್ಯಕರ್ತರು ಮುಂಬೈನಿಂದ ವಿಶೇಷ ರೈಲುಗಳ ಮೂಲಕ ಅಯೋಧ್ಯೆ ತಲುಪಿದ್ದಾರೆ.