ಪಠಾಣ್'ಕೋಟ್: ಪಂಜಾಬ್'ನ ಪಠಾಣ್ ಕೋಡ್ ಜಿಲ್ಲೆಯ ಶಾದಿಪುರ ಗ್ರಾಮದಲ್ಲಿ 6 ಶಂಕಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಭಾರತೀಯ ಸೇನಾಪಡೆಗಳು ಭಾರೀ ಕಾರ್ಯಾಚರಣೆ ನಡೆಸಲು ಆರಂಭಿಸಿದೆ ಎಂದು ಶನಿವಾರ ತಿಳಿದುಬಂದಿದೆ.
ಬ್ಯಾಗ್ ಗಳನ್ನು ಹಾಕಿಕೊಂಡಿದ್ದ 6 ಮಂದಿ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆಂದು ಗ್ರಾಮಸ್ಥರು ಹೇಳಿದ್ದು, ಹೀಗಾಗಿ ಶುಕ್ರವಾರ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನಲೆಯಲ್ಲಿ ನಿನ್ನೆ ಸಂಜೆ ಕೂಡ ಕಾರ್ಯಾಚರಣೆ ನಡೆಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈಗಲೂ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಇತರೆ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪಠಾಣ್ ಕೋಟ್ ಹಿರಿಯ ಪೊಲೀಸ್ ಅಧಿಕಾರಿ ವಿವೇಕ್ ಶೀಲ್ ಅವರು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ವಸ್ತುಗಳು ಹಾಗೂ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಪಠಾಣ್ ಕೋಟ್'ನ ಮುಥಿ ಗ್ರಾಮದಲ್ಲಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ನೋಂದಾವಣಿ ಸಂಖ್ಯೆಯನ್ನು ಹೊಂದಿರುವ ಈ ಕಾರು, ಗೋವು ಕಳ್ಳಸಾಗಾಣಿಕೆದಾರರಿಗೆ ಸಂಬಂಧಿಸಿದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದರಂತೆ ಚೆಕ್ ಪೋಸ್ಟ್ ಗಳಲ್ಲಿ ನಾಲ್ಕು ಕಾರುಗಳನ್ನು ತಡೆಹಿಡಿದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.