ದೇಶ

26/11 ದಾಳಿ ನಡೆದ 10 ವರ್ಷಗಳ ಬಳಿಕ ಭಾರತ ಸಾಕಷ್ಟು ಸರ್ವಸನ್ನದ್ಧವಾಗಿದೆ: ನೌಕಾಪಡೆ ಮುಖ್ಯಸ್ಥ

Manjula VN
ನವದೆಹಲಿ: 26/11ರ ಮುಂಬೈ ಉಗ್ರರ ದಾಳಿ ನಡೆದು 10 ವರ್ಷಗಳಾದ ಬಳಿಕ ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ ಅವರು ಹೇಳಿದ್ದಾರೆ. 
ನ.26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್, ರೈಲ್ವೆನಿಲ್ದಾಣ, ಆಸ್ಪತ್ರೆ. ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 28 ಮಂದಿ ವಿದೇಶಿಗರು ಸೇರಿದಂತೆ 166 ಜನರ ಸಾವಿಗೆ ಕಾರಣರಾದರು. ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 
ದಾಳಿ ಕುರಿತಂತೆ ಮಾತನಾಡಿರುವ ನೌಕಾಪಡೆ ಮುಖ್ಯಸ್ಥರು, ದಾಳಿ ಬಳಿಕ ಕರಾವಳಿ ಭದ್ರತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅಪಾಯಗಳು ಸಂಭವಿಸದಂತೆ ನೋಡಿಕೊಳ್ಳಲು ಕರಾವಳಿಯಲ್ಲಿ ಕಣ್ಗಾಲವನ್ನು ಹೆಚ್ಚಿಸಲಾಗಿದೆ. ದಾಳಿ ನಡೆದ 10 ವರ್ಷಗಳ ಬಳಿಕ ಭಾರತ ಸಾಕಷ್ಟು ಸರ್ವಸನ್ನದ್ಧಗೊಂಡಿದೆ ಎಂದು ಹೇಳಿದ್ದಾರೆ. 
ಭಾರತೀಯ ನೌಕಾಪಡೆ ಸಾಕಷ್ಟು ಬಲಶಾಲಿಯಾಗಿದ್ದು, ಕಡಲ ತೀರದಲ್ಲಿ ದೇಶದ ಹಿತಾಸಕ್ತಿ ಕಾಪಾಡಲು ಎಂತಹುದ್ದೇ ಪರಿಸ್ಥಿತಿ ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. ಕರಾವಳಿಯಲ್ಲಿ ಬಹುಹಂತದ ಭದ್ರತೆಗಳನ್ನು ಹೆಚ್ಚಿಸಲಾಗಿದೆ. ಕಡಲು ತೀರ ಪ್ರದೇಶಗಳಲ್ಲಿ ಕರಾವಳಿ ಪಡೆಗಳು ಹಾಗೂ ನೌಕಾಪಡೆಗಳು ಜಂಟಿಯಾಗಿ ಭದ್ರತೆಗಳನ್ನು ನೀಡುತ್ತಿವೆ ಎಂದು ತಿಳಿಸಿದ್ದಾರೆ. 
SCROLL FOR NEXT