ದೇಶ

ನ್ಯಾ. ಲೋಯಾ ಸಾವಿನ ತನಿಖೆ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಇನ್ನೊಬ್ಬ ಹೈಕೋರ್ಟ್ ನ್ಯಾಯಾಧೀಶ

Raghavendra Adiga
ನಾಗ್ಪುರ: ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಕುರಿತು ಅರ್ಜಿ ವಿಚಾರಣೆಯಿಂದ ವಿಭಾಗೀಯ ಪೀಠ ದೂರವಾದ ಬೆನ್ನಿಗೇ ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ಇನ್ನೋರ್ವ ನ್ಯಾಯಾಧೀಶ ಸಹ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಸೋಹ್ರಾಬುದ್ದೀನ್ ಶೇಖ್ ಎನ್ ಕೌಂಟರ್  ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ 2014ರಲ್ಲಿ ನಾಗ್ಪುರದ ಸರ್ಕಾರಿ ಅತಿಥಿಗೃಹದಲ್ಲಿ ತಂಗಿದ್ದಾಗ ಹೃದಯಾಘಾತದಿಂದ ನಿಧನರಾದರು. 
ಇದಾದ ಬಳಿಕ ನಕಲಿ ಎನ್ ಕೌಂಟರ್ ಪ್ರಕರಣ ನಡೆದ ವೇಳೆ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.
ನ್ಯಾಯಮೂರ್ತಿ ಲೋಯಾ ಸಾವಿನ ಕುರಿತು ವಕೀಲ ಸತೀಶ್ ಉಕೆ ಸಲ್ಲಿಸಿದ ಅರ್ಜಿ ನವೆಂಬರ್ 26ರಂದು ನ್ಯಾಯಮೂರ್ತಿಗಳಾದ ಎಸ್. ಬಿ. ಶುಕ್ರೆ ಮತ್ತು ಎಸ್ ಎಂ ಮೊಡಕ್ ಅವರನ್ನೊಳಗೊಂಡ ವಿಭಾಗೀಯ ಪೀಠದೆದುರು ವಿಚಾರಣೆಗೆ ಬಂದಿತ್ತು. ಆದರೆ ವಿಭಾಗೀಯ ಪೀಠ ವಿಚಾರಣೆಯಿಂದ ಹಿಂದೆ ಸರಿದಿದ್ದ ಕಾರಣ ಪ್ರಕ್ರಣವು ನ್ಯಾಯಮೂರ್ತಿಗಳಾದ ಪಿ.ಎನ್.ದೇಶಮುಖ್ ಹಾಗೂ ಸ್ವಪ್ನಾ ಜೋಷಿ ಅವರ ಎದುರು ಬಂದಿತ್ತು. ಆದರೆ ಇದೀಗ ಸ್ವಪ್ನಾ ಜೋಷಿ ತಾವು ಪ್ರಕರಣದಿಂದ ಹಿಂದೆ ಸರಿದಿದ್ದಾಗಿ ಘೊಷಿಸಿದ್ದಾರೆ.
ಲೋಯಾ ಅವರ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ರಕ್ಷಿಸಬೇಕೆಂದು ಉಕೆ ತಮ್ಮ ಅರ್ಜಿಯಲ್ಲಿ ವಿನಂತಿಸಿದ್ದಾರೆ. ಲೋಯಾ ಅವರ ಮರಣದ ತನಿಖೆಗಾಗಿ ಅವರು ಈಗಾಗಲೇ ನಾಗ್ಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದೆಲ್ಲದರ ನಡುವೆ ಲೋಯಾ ಸಹಜವಾಗಿ ಸಾವನ್ನಪ್ಪಿದ್ದಾರೆ, ಅವರ ಸಾವಿನ ಸಂಬಂಧ ಸ್ವತಂತ್ರ ತನಿಖೆಯ ಬೇಡಿಕೆ ಸಲ್ಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ಏಪ್ರಿಕ್ ನಲ್ಲಿ ತೀರ್ಪು ನೀಡಿದೆ.
SCROLL FOR NEXT