ದೆಹಲಿ ಪೊಲೀಸ್ ಪ್ರಧಾನ ಕಚೇರಿ ಮಹಡಿಯಿಂದ ಬಿದ್ದು ಎಸಿಪಿ ಆತ್ಮಹತ್ಯೆ
ನವದೆಹಲಿ: ರಾಜಧಾನಿಯ ದೆಹಲಿಯ ಪೊಲೀಸ್ ಪ್ರಧಾನ ಕಚೇರಿ ಕಟ್ಟಡದಿಂದ ಕೆಳಗೆ ಹಾರಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.
ಪ್ರೇಮ್ ಬಲ್ಲಭ್ (53) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯನ್ನು ಅಪರಾಧ ಹಾಗೂ ಸಂಚಾರ ನಿರ್ವಹಣಾ ವಿಭಾಗಕ್ಕೆ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿತ್ತು.
ಮಹಡಿಯಿಂದ ಬಿದ್ದ ಪ್ರೇಮ್ ವಲ್ಲಭ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ವೈದ್ಯರು ಅಧಿಕಾರಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಅಧಿಕಾರಿಯ ಸಾವಿಗೆ ಇನ್ನೂ ಕಾರಣಗಳು ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.