ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ
ಇಟಾನಗರ: ನೋವಿನಿಂದ ನರಳುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ಸ್ವಂತ ಹೆಲಿಕಾಪ್ಟರ್ ನಲ್ಲಿಂದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಅವರು ಮಾನವೀಯತೆ ಮೆರೆದಿದ್ದಾರೆ.
ರಾಜ್ಯಪಾಲ ಮಿಶ್ರಾ ಅವರು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ತುಂಬು ಗರ್ಭೀಣಿಯನ್ನು ಇವಾಂಗ್ ನಿಂದ ಇಟಾನಗರದವರೆಗೆ ಕರೆತಂದು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ರಾಜ್ಯಪಾಲರ ಹೆಲಿಕಾಪ್ಟರ್ ತೇಜ್ಪುರದಲ್ಲಿ ಇಂಧನ ತುಂಬಿಸಿಕೊಂಡಿತ್ತು. ಬಳಿಕ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಾಜ್ಯಪಾಲರು, ವಾಯುಪಡೆ ಹೆಲಿಕಾಪ್ಟರ್'ಗೆ ಮನವಿ ಮಾಡಿಕೊಂಡು ಗರ್ಭಿಣಿ ಹಾಗೂ ಆಕೆಯ ಪತಿಯನ್ನು ಮೊದಲು ರಾಜಧಾನಿ ತಲುವಂತೆ ವ್ಯವಸ್ಥೆ ಮಾಡಿದ್ದರು. ಬಳಿಕ ಮತ್ತೊಂದು ವಿಮಾನದಲ್ಲಿ ತಮ್ಮ ಪ್ರಯಾಣ ಬೆಳೆಸಿದ್ದಾರೆ.
ಇದಲ್ಲದೆ ಮಿಶ್ರಾ ಅವರು ರಾಜಭವನ ಹೆಲಿಪ್ಯಾಡ್'ನಿಂತ ಪ್ರಸೂತಿ ತಜ್ಞರನ್ನೊಳಗೊಂಡ ಆ್ಯಂಬುಲೆನ್ಸ್ ವಾಹನವನ್ನು ವ್ಯವಸ್ಥೆ ಮಾಡಿ ಮಹಿಳೆ ಆಸ್ಪತ್ರೆಗೆ ತಲುಪಲು ವಿಳಂಬವಾಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆಗೆ ಸಿಸೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.
ತವಾಂಗ್ ಪಟ್ಟಣದಿಂದ ಇಟಾನಗರಕ್ಕೆ 200 ಕಿಮೀ ದೂರವಿದ್ದು, ಬೆಟ್ಟಗುಡ್ಡ ಹಾಗೂ ಕಣಿವೆ ಪ್ರದೇಶದ ರಸ್ತೆ ತಲುಪಲು 15 ತಾಸುಗಳು ಬೇಕಾಗುತ್ತದೆ. ಆದರೆ, ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದರಿಂದ ಮಹಿಳೆ ಎರಡು ಗಂಟೆಯ ಒಳಗಾಗಿ ಆಸ್ಪತ್ರೆಗೆ ತಲುಪುವುದು ಸಾಧ್ಯವಾಗಿದೆ.
ತವಾಂಗ್ ನಲ್ಲಿ ಬಧುವಾರ ರಾಜ್ಯಪಾಲರು ಭಾಗವಿಸಿದ್ದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಸ್ಥಳೀಯ ಶಾಸಕರು ಚರ್ಚೆ ನಡೆಸಿದ್ದರು. ಈ ವೇಳೆ ಈ ವಿಚಾರ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಮಹಿಳೆಯೊಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದು, ಮುಂದಿನ 3 ದಿನಗಳ ಕಾಲ ತವಾಂಗ್ ಹಾಗೂ ಗುವಾಹಟಿ ಮಧ್ಯೆ ಹೆಲಿಕಾಪ್ಟರ್ ಸೇವೆ ಇಲ್ಲ ಎಂದು ಶಾಸಕರು ಮಾಹಿತಿ ನೀಡಿದ್ದರು. ಈ ವೇಳೆ ರಾಜ್ಯಪಾಲರು ತಮ್ಮ ಇಬ್ಬರು ಅಧಿಕಾರಿಗಳೊಂದಿಗೆ ಮಾತನಾಡಿ, ತಮ್ಮ ಹೆಲಿಕಾಪ್ಟರ್ ನಲ್ಲಿ ಮಹಿಳೆ ಹಾಗೂ ಆಕೆಯ ಪತಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರು.