ಹೈದರಾಬಾದ್: ಒಬ್ಬಳೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಹುಡುಗರು ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಭೀಕರ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಜಗ್‌ತಿಯಾಲ್ ಪಟ್ಟಣದಲ್ಲಿ ನಡೆದ ಘಟನೆಯಲ್ಲಿ ಹತ್ತನೇ ತರಗತಿಯ ಇಬ್ಬರು ಹುಡುಗರು ತಾವು ಪ್ರೀತಿಸುತ್ತಿದ್ದ ಹುಡುಗಿ ವಿಚಾರವಾಗಿ ಜಗಳವಾಡಿದ್ದಲ್ಲದೆ ಮದ್ಯ ಕುಡಿದು ಕ್ರೋಧದ ಆವೇಶಕ್ಕೆ ಒಳಗಾಗಿ ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ರಲ್ಲಿ ಕೆ ಮಹೇಂದರ್ ಮತ್ತು ರವಿ ತೇಜ ಎಂದು ಗುರುತಿಸಲಾಗಿದೆ. ಇದರಲ್ಲಿ ಮಹೇಂದರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ರವಿ ತೇಜ ಗಂಭೀರವಾದ ಸುಟ್ಟ ಗಾಯದೊಡನೆ ಆಸ್ಪತ್ರೆ ಸೇರಿ ಅಲ್ಲಿ ಅಸು ನೀಗಿದ್ದಾನೆ.
ತ್ರಿಕೋನ ಪ್ರೇಮ ಕಥೆಯಲ್ಲಿ ಒಂದು ಟ್ವಿಸ್ಟ್ ಇದ್ದು ಹುಡುಗರಿಬ್ಬರು ಬೆಂಕಿ ಹಚ್ಚಿಕೊಳ್ಳುವ ವೇಳೆ ಸ್ಥಳದಲ್ಲಿ ಮೂರನೇ ಹುಡುಗನೊಬ್ಬನಿದ್ದ ಎಂದು ಮೃತ ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. ಇದರಿಂದಾಗಿ ಪೋಲೀಸರು ಪ್ರಕರಣವನ್ನು ವಿಭಿನ್ನ ಆಯಾಮದಿಂದ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಬಿಯರ್ ಬಾಟಲಿ, ಮೊಬೈಲ್ ಫೋನ್ ಗಳು ದೊರಕಿದ್ದು ಮೃತರಿಬ್ಬರೂ ಮಿಷನರಿ ಶಾಲೆ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳಿಬ್ಬರೂ ಒಬ್ಬಳೇ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ಪ್ರೇಮ ಪ್ರಕರಣದಿಂದಲೇ ಇಬ್ಬರೂ ಸಾವಿಗೆ ಶರಣಾಗಿದ್ದಾರೆ. ಯುವತಿಯ ವಿಚಾರವಾಗಿ ತೀವ್ರವಾಗಿ ಜಗಳ ಆಡಿದ್ದ ಹುಡುಗರು ಪರಸ್ಪರರ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೋಲೀಸರು ಹೇಳಿದ್ದಾರೆ