ದೇಶ

ನ್ಯಾಯಾಧೀಶರ ನಡುವಿನ ತಪ್ಪು ತಿಳುವಳಿಕೆಗಳಿಗೆ ಅಂತ್ಯ ಹಾಡಿ; ಸಿಜೆಐ ರಂಜನ್ ಗಗೋಯ್'ಗೆ ಸಂತೋಷ್ ಹೆಗ್ಡೆ

Manjula VN
ಹೈದರಾಬಾದ್: ನ್ಯಾಯಾಧೀಶರ ನಡುವಿನ ತಪ್ಪು ತಿಳುವಳಿಕೆಗಳಿಗೆ ಅಂತ್ಯ ಹಾಡಿ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ಐಕಮತ್ಯ ಉತ್ತೇಜನಗೊಳ್ಳುವಂತೆ ಮಾಡಿ ಎಂದು ಸುಪ್ರೀಂಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಬುಧವಾರ ಸಲಹೆ ನೀಡಿದ್ದಾರೆ. 
ರಂಜನ್ ಗಗೋಯ್ ಅವರು ಸುಪ್ರೀಂಕೋರ್ಟ್ ನ 46ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವತಚನ ಸ್ವೀಕರಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ, ನೂತನ ಮುಖ್ಯ ನ್ಯಾಯಾಧೀಶರು ನ್ಯಾಯಾಧೀಶರ ನಡುವಿನ ತಪ್ಪು ತಿಳುವಳಿಕೆಗಳಿಗೆ ಅಂತ್ಯ ಹಾಡಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರಬೇಕು. ನ್ಯಾಯ ವಿಚಾರಕ್ಕೆ ಬಂದಾಗ ನ್ಯಾಯಾಧೀಶರೆಲ್ಲರೂ ಒಂದೇ ಎಂಬ ಭಾವನೆ ಜನರಲ್ಲಿ ಬರುವಂತೆ ಮುಖ್ಯ ನ್ಯಾಯಾಮೂರ್ತಿಗಳು ಮಾಡಬೇಕೆಂದು ಹೇಳಿದ್ದಾರೆ. 
ನ್ಯಾಯಮೂರ್ತಿ ಗಗೋಯ್ ಅವರ ಜವಾಬ್ದಾರಿ ಇದೀಗ ಹೆಚ್ಚಾಗಿದೆ. ನ್ಯಾಯಾಧೀಶರ ಕುರಿತಂತೆ ನೂತನ ಮುಖ್ಯ ನ್ಯಾಯಮೂರ್ತಿಗಳು ಈಗಾಗಲೇ ಮಾತನಾಡಿರುವುದಕ್ಕೆ ಬಹಳ ಸಂತೋಷವಾಯಿತು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಗಗೋಯ್ ಅವರು ಸಾಕಷ್ಟು ಪಾರದರ್ಶಕರಾಗಿರಬೇಕು. ನ್ಯಾಯಾಂಗ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು ಸುಪ್ರೀಂಕೋರ್ಟ್ ಈಗಾಗಲೇ ತೀರ್ಮಾನಿಸಿದೆ. ಇದಲ್ಲದೆ, ಕಳೆದ ಬಾರಿ ನ್ಯಾಯಾಧೀಶರ ನಡುವೆ ಉಂಟಾಗಿದ್ದ ತಪ್ಪು ತಿಳುವಳಿಕೆಗಳು ಮತ್ತೆ ಪುನರಾವರ್ತನೆಗೊಳ್ಳಬಾರದು. 
ತಪ್ಪು ತಿಳುವಳಿಕೆಗಳು ಸಾಕಷ್ಟು ಸಮಸ್ಯೆಗಳನ್ನುಂಟು ಮಾಡುತ್ತೇವೆ. ಇಂತಹ ಸಮಸ್ಯೆಗಳು ನ್ಯಾಯಾಂಗದ ಮೇಲೆ ಜನರಿಗಿರುವ ಗೌರವನ್ನು ಕಡಿಮೆ ಮಾಡುತ್ತದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ಒಮ್ಮೆ ನಂಬಿಕೆ ಕಳೆದುಕೊಂಡರೆ, ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತದೆ. 
ಮುಖ್ಯ ನ್ಯಾಯಮೂರ್ತಿಗಳು ಜನರ ನಂಬಿಕೆಯನ್ನು ಗಳಿಸಬೇಕು. ಜನರ ಪ್ರತಿಕ್ರಿಯೆಗಳ ಕುರಿತು ಚರ್ಚೆ ನಡೆಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಬೇಕು. ವಿಳಂಬ ನೀತಿ ಹನುಮನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. ಬಾಕಿಯಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿದರೆ, ಅದು ದೊಡ್ಡ ಸಾಧನೆಯಾಗುತ್ತದೆ ಎಂದು ತಿಳಿಸಿದ್ದಾರೆ.
SCROLL FOR NEXT