ದೆಹಲಿ: ಕೆಟ್ಟ ಹವಾಮಾನ ಮತ್ತು ಮಾಲಿನ್ಯದ ದೃಷ್ಟಿಯಿಂದ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರಿಗೆ ಕುಡಿಯುವ ನೀರು, ನೈರ್ಮಲ್ಯ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಕೇಂದ್ರ ಹಾಗೂ ಎಎಪಿ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಹೈಕೋರ್ಟ್ ಬಯಸಿದೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಎಎಪಿ ಸರ್ಕಾರ ಹೊರತುಪಡಿಸಿ ಈ ವಿಷಯಕ್ಕೆ ಸಂಬಂಧಿಸಿದ ದೆಹಲಿ ಟ್ರಾಫಿಕ್ ಪೊಲೀಸ್ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಲುವೇನು ಎಂದು ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನೂ ಮತ್ತು ನ್ಯಾಯಾಧೀಶ ವಿ. ಕೆ. ರಾವ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದ್ದು, ನೋಟಿಸ್ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರದ ಪರ ವಕೀಲ ರವಿ ಪ್ರಕಾಶ್ ಮತ್ತು ಪರ್ಮಾನು ಆಲಿ ಪೀಠ ಎದುರು ಹಾಜರಿದ್ದು, ನೋಟಿಸ್ ಸ್ವೀಕರಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜನವರಿ 23, 2019ಕ್ಕೆ ಮುಂದೂಡಲಾಗಿದ್ದು, ಅಷ್ಟರಲ್ಲಿ ತಮ್ಮ ಪ್ರತಿಕ್ರಿಯೆ ಸೂಚಿಸುವಂತೆ ತಿಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಆಗಲೀ ಅಥವಾ ದೆಹಲಿ ಸರ್ಕಾರವಾಗಲೀ ಕರ್ತವ್ಯ ನಿರತ ಪೊಲೀಸರಿಗೆ ಕುಡಿಯುವ ನೀರು, ಅಥವಾ ನೈರ್ಮಲ್ಯ ಸಲಕರಣೆಗಳನ್ನು ಒದಗಿಸಿಲ್ಲ ಎಂಬುದು ಆರ್ ಟಿಐಯಡಿ ಪಡೆದ ಮಾಹಿಯಿಂದ ಬೆಳಕಿಗೆ ಬಂದಿದೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಆರೋಪಿಸಿತ್ತು.