ದೇಶ

ಪ್ರಧಾನಿ ಅಭ್ಯರ್ಥಿಯೇ ಇಲ್ಲದೇ ಬಿಜೆಪಿಗೆ ಪರ್ಯಾಯ ಮೈತ್ರಿಕೂಟ ರಚನೆಯಾಗಲಿದೆ: ನಾಯ್ಡು

Srinivas Rao BV
ಅಮರಾವತಿ: 2019 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಗೆ ಪರ್ಯಾಯವಾಗಬಲ್ಲ ರಾಜಕೀಯ ಪಕ್ಷಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಬಿಜೆಪಿಗೆ ಪರ್ಯಾಯವಾಗಿ ವಿಪಕ್ಷಗಳ ಮೈತ್ರಿ ರಚನೆಗೆ ಕಸರತ್ತು ಮಾಡುತ್ತಿದ್ದಾರೆ. ಆದರೆ ಪ್ರಧಾನಿ ಅಭ್ಯರ್ಥಿಯಾರಾಗುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. 
ಈ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಮಾತನಾಡಿದ್ದು, ಪ್ರಧಾನಿ ಅಭ್ಯರ್ಥಿಯೇ ಇಲ್ಲದೇ ಬಿಜೆಪಿಗೆ ಪರ್ಯಾಯವಾದ ಒಕ್ಕೂಟ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡದೇ ಇದ್ದ ಹಿನ್ನೆಲೆಯಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದ ಚಂದ್ರಬಾಬು ನಾಯ್ಡು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯುಪಿಎ, ಎನ್ ಡಿಎ ಎರಡೂ ಮೈತ್ರಿಕೂಟದೊಂದಿಗೆ ಕೆಲಸ ಮಾಡಿದ್ದೇನೆ ಆದರೆ ಈಗಿನಷ್ಟು ಕೆಟ್ಟ ದಿನಗಳನ್ನು ಕಂಡಿರಲಿಲ್ಲ. ಅಗತ್ಯವಾದರೆ ಬಿಜೆಪಿಗೆ ಪರ್ಯಾಯವಾದ ರಂಗ ರಚಿಸುವಲ್ಲಿ ತಾವು ಪ್ರಮುಖ ಪಾತ್ರ ವಹಿಸಲು ಸಿದ್ಧ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಿ ಅಭ್ಯರ್ಥಿಯಾಗ್ತೀರಾ ಎಂಬ ಪ್ರಶ್ನೆಗೂ ಸ್ಪಷ್ಟನೆ ನೀಡಿರುವ ಚಂದ್ರಬಾಬು ನಾಯ್ಡು, ನಾನು ಕೇಂದ್ರ ಸರ್ಕಾರದ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ರಾಷ್ಟ್ರರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT