ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.40 ಸಾವಿರ ಕೋಟಿ ಮೌಲ್ಯದ ಬಹು ನಿರೀಕ್ಷಿತ ಅತ್ಯಾಧುನಿಕ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ ಖರೀದಿ ಸೇರಿದಂತೆ 8 ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ರಾಜಧಾನಿ ದೆಯರಿ ಹೈದರಾಬಾದ್ ಹೌಸ್ ನಲ್ಲಿ 19ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದಲ್ಲಿ 5.43 ಬಿಲಿಯನ್ ಡಾಲರ್ ಮೊತ್ತದ 5 'ಎಸ್-400 ಟ್ರಯಂಫ್' ಕ್ಷಿಪಣಿ ನಿರೋಧಕ ವಾಯುರಕ್ಷಣಾ ವ್ಯವಸ್ಥೆ ಖರೀದಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.
ಭಾರತ ಹಾಗೂ ರಷ್ಯಾ ನಡುವಣ 19ನೇ ದ್ವಿಪಕ್ಷೀಯ ಸಮಾವೇಶ ರಾಜಧಾನಿ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಆರಂಭವಾಗಿದ್ದು, ಮೋದಿ ಹಾಗೂ ಪುಟಿನ್ ಅವರು ನಿರ್ಬಂಧಿತ ಸಭೆಯನ್ನು ನಡೆಸಿದ್ದಾರೆ.
ಪುಟಿನ್ ಜೊತೆಗೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿಯವರು ಎಸ್-400 ಟ್ರಯಂಫ್'ಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ, ಉಭಯ ರಾಷ್ಟ್ರಗಳು ಇನ್ನಿತರೆ ಮಹತ್ವದ ಒಪ್ಪಂದಕ್ಕೂ ಸಹಿ ಹಾಕಿವೆ ಎಂದು ವರದಿಗಳು ತಿಳಿಸಿವೆ.
ರಷ್ಯಾದ ಸೈಬೀರಿಯಾ ಬಳಿಯಿರುವ ನೊವೊಸಿಬಿರ್ಸ್ಕ್ ನಲ್ಲಿ ಭಾರತೀಯ ಮೇಲ್ವಿಚಾರಣಾ ಕೇಂದ್ರವನ್ನು ನಿರ್ಮಿಸುವ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಖರೀಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಈ ಹಿಂದೆ ಅಮೆರಿಕ ಎಚ್ಚರಿಕೆ ನೀಡಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕಾದಿಂದ ವಿಶೇಷ ವಿನಾಯಿತಿ ಪಡೆಯುವುದಾಗಿ ಭಾರತ ಹೇಳಿತ್ತು.
ಈ ಹಿನ್ನಲೆಯಲ್ಲಿ ಸುಮಾರು ರೂ.40 ಸಾವಿರ ಕೋಟಿ ಮೌಲ್ಯದ ಎಸ್-400 ಏರ್'ಡಿಪೆನ್ಸ್ ಸಿಸ್ಟಂ ಖರೀದಿಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.
ಯಾವುದೇ ಒಪ್ಪಂದವು ಅಮೆರಿಕಾ ಅಥವಾ ಅದರ ಮೈತ್ರಿ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವುದಿಲ್ಲ. ಖರೀದಿದಾರರು ರಕ್ಷಣಾ ಉಪಕರಣಗಳ ಆಮದು ಪ್ರಮಾಣ ಕಡಿಮೆ ಮಾಡುತ್ತಿದ್ದರೆ ಮತ್ತು ರಷ್ಯಾದ ಮೇಲೆ ಅವಲಂಬನೆಯಿಂದ ಬಿಡಿಸಿಕೊಳ್ಳುತ್ತಿದಾದರೆ ಎನ್ನುವ ಖಾತ್ರಿ ಇದ್ದರೆ, ಅಮೆರಿಕಾದ ಅಧ್ಯಕ್ಷರು ದಿಗ್ಬಂಧನದಿಂದ ರಿಯಾಯ್ತಿ ಕೊಡಬಹುದಾಗಿದೆ. ಭಾರತ ಈ ಮೂರು ಷರತ್ತುಗಳನ್ನು ಪೂರೈಸುವುದರಿಂದ ಭಾರತಕ್ಕೆ ಅಮೆರಿಕ ಆರ್ಥಿಕ ದಿಗ್ಬಂಧನದಿಂದ ರಿಯಾಯಿತಿ ನೀಡಬಹುದು ಎಂಬ ಆಶಾಭಾವನೆ ವ್ಯಕ್ತವಾಗತೊಡಗಿವೆ.
ಮಾತುಕತೆ ವೇಳೆ ಉಭಯ ರಾಷ್ಟ್ರಗಳು ಐಎನ್ಎಸ್ ಚಕ್ರ ಜಲಾಂತರ್ಗಾಮಿ ನೌಕೆ ಜಾಗಕ್ಕೆ ಮರು ನಿರ್ಮಾಣಗೊಂಡಿರುವ, ಪರಮಾಣು ಇಂಧನ ಚಾಲಿತ ಅಕುಲಾ ದರ್ಜೆ ಸಬ್ ಮರೀನ್ ಖರೀದಿಗೆ ರೂ.14 ಸಾವಿರ ಕೋಟಿ ಒಪ್ಪಂದ, ಕ್ರಿವಾಕ್ ದರ್ಜೆಯ ಲಘು ನೌಕೆಗಳನ್ನು ರೂ.14 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿ, ದೇಶದ ಒಂದು ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಏಕೆ-103 ರೈಫಲ್ ಉತ್ಪಾದನೆಗೆ ಒಪ್ಪಂದವೇರ್ಪಡಲಿದೆ ಎಂದು ಹೇಳಲಾಗಿದೆ.
ಇದಲ್ಲದೆ 2022ಕ್ಕೆ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆ ರೂಪಿಸಿದ್ದು, ಇದಕ್ಕೆ ಪೂರಕವಾಗಿ ಭಾರತದ ಗಗನಯಾತ್ರಿಗಳನ್ನು ಕೆಲ ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ಕರೆದೊಯ್ಯುವ ಕುರಿತೂ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ ಎನ್ನಲಾಗಿದೆ. ಈ ಹಿಂದೆ ಭಾರತದ ರಾಕೇಶ್ ಶರ್ಮಾ ಅವರಿಗೂ ರಷ್ಯಾ ತರಬೇತಿ ನೀಡಿ 1984ರಲ್ಲಿ ಬಾಹ್ಯಾಕಾಶಕ್ಕೆ ಕರೆದೊಯ್ದಿತ್ತು.