ಆಪಲ್ ಉದ್ಯೋಗಿ ಹತ್ಯೆ: ಸಹೋದ್ಯೋಗಿ ಪರ ನಿಂತ ಉತ್ತರ ಪ್ರದೇಶ ಪೊಲೀಸರು
ಲಖನೌ: ಆಪಲ್ ಉದ್ಯೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪೊಲೀಸ್ ಪೇದೆಯ ಪರವಾಗಿ ಉತ್ತರ ಪ್ರದೇಶ ಪೊಲೀಸರು ನಿಂತಿದ್ದು, ಪೇದೆ ಪ್ರಶಾಂತ್ ಚೌಧರಿ ಬಂಧನವನ್ನು ವಿರೋಧಿಸಿ ಸಹೋದ್ಯೋಗಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ರಾತ್ರಿ ವೇಳೆ ವಾಹನ ತಪಾಸಣೆ ನಡೆಸುವ ವೇಳೆ, ಕಾರು ನಿಲ್ಲಿಸದ ಆಪಲ್ ಉದ್ಯೋಗಿ ವಿವೇಕ್ ತಿವಾರಿಯ ಮೇಲೆ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಆದರೆ ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ವಿವೇಕ್ ತಿವಾರಿಯೇ ತಮಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು ಎಂದು ಹೇಳಿದ್ದಾರೆ. ಆದರೆ ತಿವಾರಿ ಜೊತೆಯಲ್ಲಿದ್ದ ಮತ್ತೋರ್ವ ಪ್ರಯಾಣಿಕ ಚೌಧರಿ ಯಾವುದೇ ಎಚ್ಚರಿಕೆ ನೀಡದೇ ಏಕಾಏಕಿ ಗುಂಡಿನ ದಾಳಿ ಮಾಡಿದರು ಎಂದು ಹೇಳಿದ್ದಾರೆ.
ಆದರೆ ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ಪರವಾಗಿ ನಿಂತಿರುವ ಸಹೋದ್ಯೋಗಿಗಳು, ಪೊಲೀಸರ ಜೀವಕ್ಕೂ ಬೆಲೆ ಇದೆ ಎನ್ನುತ್ತಿದ್ದಾರೆ, "ನನ್ನ ಎಫ್ಐಆರ್ ನ್ನು ಏಕೆ ದಾಖಲಿಸಿಲ್ಲ? ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ಚೌಧರಿ ಪ್ರಶ್ನಿಸಿದ್ದಾರೆ. ಚೌಧರಿಗೆ ಬೆಂಬಲ ಸೂಚಿಸಿ ಈಗಾಗಲೇ ಆತನ ಸಹೋದ್ಯೋಗಿಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.