ನವದೆಹಲಿ: ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಭಾರತ ನವೆಂಬರ್ ನಲ್ಲಿ ಇರಾನ್ ನಿಂದ ತೈಲ ಖರೀದಿಸಲಿದೆ ಎಂದು ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಇರಾನ್ ನಿಂದ ಖರೀದಿಸುವ ಬಗ್ಗೆ ಇದೇ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪ್ರಧಾನ್ ಅವರು, ನವೆಂಬರ್ ನಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದರು.
ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಅಮೆರಿಕದ ನಿರ್ಬಂಧಗಳಿಂದ ವಿನಾಯ್ತಿ ಸಿಗುತ್ತದೆಯೋ ಅಥವಾ ಇಲ್ಲ ಎಂಬುದು ಗೊತ್ತಿಲ್ಲ ಎಂದರು ಸಚಿವರು ತಿಳಿಸಿದ್ದಾರೆ.
ಭಾರತ ತನ್ನದೇ ಆದ ತೈಲ ಅವಶ್ಯಕತೆಗಳನ್ನು ಹೊಂದಿದ್ದು, ಅದನ್ನು ಪೂರೈಸಬೇಕು. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತೇವೆ ಎಂದರು.
ಇದೇ ವೇಳೆ ಮಾತನಾಡಿದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ಅವರು, ನವೆಂಬರ್ ತಿಂಗಳಲ್ಲಿ ಇರಾನ್ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಎರಡು ಕಂಪನಿಗಳಲ್ಲಿ ನಮ್ಮದು ಒಂದು. ಈಗಾಗಲೇ ನವೆಂಬರ್ ತಿಂಗಳ ತೈಲ ಖರೀದಿಗೆ ಆರ್ಡರ್ ಮಾಡಲಾಗಿದೆ ಎಂದರು.
ಉದ್ಯಮದ ಉನ್ನತ ಮೂಲಗಳ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್(ಎಂಆರ್ ಪಿಎಲ್) ಈಗಗಾಲೇ ನವೆಂಬರ್ ತಿಂಗಳಲ್ಲಿ ಇರಾನ್ ನಿಂದ 1.25 ಮಿಲಿಯನ್ ಟನ್ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ.