ಗುರುಗ್ರಾಮ್: ಗುರುಗ್ರಾಮ್ ನಲ್ಲಿನ ಟವರ್ ಬಿ6 ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ 2.30ರ ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ ಮಲಗಿದ್ದವರನ್ನು ಜೋರಾಗಿ ಕೂಗಿ ಎಚ್ಚರಿಸಿದ್ದ ಮಹಿಳೆ ಕೊನೆಗೆ ತಾನೇ ಬೆಂಕಿಗಾಹುತಿಯಾಗಿರುವ ದಾರುಣ ಘಟನೆ ನಡೆದಿದೆ.
32 ವರ್ಷಧ ಸ್ವಾತಿ ಗಾರ್ಗ್ ಮೃತಪಟ್ಟ ಮಹಿಳೆ. ಕಳೆದ ರಾತ್ರಿ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಸ್ವಾತಿ ಜೋರಾಗಿ ಕೂಗುತ್ತಾ ಎಲ್ಲರನ್ನು ಎಚ್ಚರಿಸಿದ್ದಾರೆ. ಕೂಡಲೇ ಹಲವರು ಫ್ಲಾಟ್ ಗಳಿಂದ ಹೊರಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆದರೆ ಸ್ವಾತಿ ಹೊರಬರುವ ವೇಳೆ ಡೋರ್ ಲಾಕ್ ಆಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
3 ಗಂಟೆ ಸುಮಾರಿಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ 10ನೇ ಮಹಡಿಯಲ್ಲಿದ್ದ ಸ್ವಾತಿಯನ್ನು ರಕ್ಷಿಸಿದ್ದಾರೆ. ಆದರೆ ಸ್ವಾತಿ ಅವರು ಪ್ರಜ್ಞೆತಪ್ಪಿದ್ದರಿಂದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಸ್ವಾತಿ ಕೊನೆಯುಸಿರೆಳೆದಿದ್ದರು.