ನವದೆಹಲಿ: ಸರಿಯಾಗಿ ಎರಡು ವರ್ಷಗಳ ಹಿಂದೆ ನಡೆದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಸಂಬಧಿಸಿದಂತೆ ಸಿಬಿಐ ಸೋಮವಾರ ಮುಕ್ತಾಯ ವರದಿ ಸಲ್ಲಿಸಿದೆ.
ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ಸಿಬಿಐ ಇಂದು ಮುಕ್ತಾಯ ವರದಿ ಸಲ್ಲಿಸಿದ್ದು, ನವೆಂಬರ್ 19ಕ್ಕೆ ಕೋರ್ಟ್ ವಿಚಾರಣೆ ನಡೆಸಲಿದೆ.
ಜೆಎನ್ ಯು ವಿದ್ಯಾರ್ಥಿಯ ಪತ್ತೆಗಾಗಿ ನಾವು ಎಲ್ಲಾ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವು. ಅಲ್ಲದೆ ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿಗೆ ತಮ್ಮ ತಂಡಗಳನ್ನು ಕಳುಹಿಸಿದ್ದೇವು. ನಜೀಬ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ಸಹ ಘೋಷಿಸಿದ್ದೇವೆ. ದೇಶಾದ್ಯಂತ ಆತನ ಫೋಟೋವನ್ನು ಹಂಚಲಾಗಿತ್ತು. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಜೀಬ್ ಅಹ್ಮದ್ ಪತ್ತೆಯಾಗಿಲ್ಲ ಮತ್ತು ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ ಎಂದು ಸಿಬಿಐ ತನ್ನ ಮುಕ್ತಾಯ ವರದಿಯಲ್ಲಿ ತಿಳಿಸಿದೆ.
ಎರಡು ವರ್ಷಗಳ ಹಿಂದೆ ಜೆಎನ್ ಯು ಕ್ಯಾಂಪಸ್ ನಿಂದ ವಿದ್ಯಾರ್ಥಿ ನಾಪತ್ತೆಯಾದಾಗ ಮೊದಲು ದೆಹಲಿ ಪೊಲೀಸರ ಮೂರು ತಂಡಗಳು ಶೋಧ ಕಾರ್ಯ ನಡೆಸಿದ್ದವು. ಬಳಿಕ ದೆಹಲಿ ಪೊಲೀಸ್ ವಿಶೇಷ ತನಿಖಾ ತಂಡಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ಅಂತಿಮವಾಗಿ ಸಿಬಿಐಗೆ ಹಸ್ತಾಂತರಿಸಲಾಗಿತ್ತು.
2016ರ ಅಕ್ಟೋಬರ್ 15ರಂದು ಜೆಎನ್ ಯು ಮಹಿ-ಮಾಂಡ್ವಿ ಹಾಸ್ಟೆಲ್ ನಿಂದ ಅಹ್ಮದ್ ಕಾಣೆಯಾಗಿದ್ದರು. ಕಾಣೆಯಾದ ಹಿಂದಿನ ದಿನ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೆ ಸೇರಿದ ವಿದ್ಯಾರ್ಥಿಗಳ ಜೊತೆ ಜಗಳ ಮಾಡಿಕೊಂಡಿದ್ದರು.