ದೇಶ

ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ: ಪಾಕ್ 10 ಸರ್ಜಿಕಲ್ ದಾಳಿ ಬೆದರಿಕೆ ಕುರಿತು ಲೆ.ಜ.ರನ್ಬೀರ್ ಸಿಂಗ್

Manjula VN
ಶ್ರೀನಗರ: ಯಾರು, ಎಲ್ಲಿ ಯಾವ ರೀತಿಯ ಹೇಳಿಕೆಗಳನ್ನೇ ನೀಡಿದರೂ, ಅದಾವುದಕ್ಕೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಅದನ್ನು ಎದುರಿಸಲು ಭಾರತೀಯ ಸೇನಾಪಡೆ ಸದಾಕಾಲ ಸಿದ್ಧವಾಗಿರುತ್ತದೆ ಎಂದು ಉತ್ತರ ಸೇನಾಪಡೆ ಮುಖ್ಯಸ್ಥ ಲೆ.ಜ.ರನ್ಬೀರ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಬೆದರಿಕೆ ಹಾಕಿದ್ದ ಪಾಕಿಸ್ತಾನ, ಭಾರತ ನಮ್ಮ ಮೇಲೆ ಇನ್ನೊಂದೇ ಒಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ, ಅವರ ಮೇಲೆ 10 ಸರ್ಜಿಕಲ್ ದಾಳಿ ನಡೆಸುತ್ತೇವೆಂದು ಹೇಳಿತ್ತು. 
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಲೆ.ಜ.ರನ್ಬೀರ್ ಸಿಂಗ್ ಅವರು, ಯಾರು, ಎಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನೇ ನೀಡಿದರೂ ಅದಾವುದಕ್ಕೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಅದನ್ನು ಎದರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆಂದು ಹೇಳಿದ್ದಾರೆ. 
ಗಡಿ ನಿಯಂತ್ರಣ ರೇಖೆ ನಡೆಯುವ ಒಳನುಸುಳುವಿಕೆಗೆ ಸೇನಾಪಡೆಗಳು ದಿಟ್ಟ ಉತ್ತರವನ್ನು ನೀಡುತ್ತಿದ್ದು, ಹಲವು ಪ್ರದೇಶಗಳಲ್ಲಿ ಹಿಡಿತ ಸಾಧಿಸಿದ್ದೇವೆ. ಸೇನಾಪಡೆಗಳ ದಿಟ್ಟ ಉತ್ತರಗಳಿಂದಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಉಗ್ರರನ್ನು ಹತ್ಯೆ ಮಾಡಲು ಸಾಧ್ಯವಾಗುತ್ತಿದೆ. 
ನಮಗೆ ಬಂದಿರುವ ಮಾಹಿತಿಗಳ ಪ್ರಕಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಬಂದಿಲ್ಲ. ಹೀಗಾಗಿಯೇ ಪಾಕಿಸ್ತಾನ ತರಬೇತಿ ನೀಡಿದ ಉಗ್ರರು ಭಾರತದ ಗಡಿ ನುಸುಳಲು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT