ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೋ ಮುಳಕಲ್
ಕೊಚ್ಚಿ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪವನ್ನು ಎದುರಿಸುತ್ತಿರುವ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಸೋಮವಾರ ತಿಳಿದುಬಂದಿದೆ.
ಕುರಿಯಕೋಸ್ ಕಟ್ಟುಥಾರ ಎಂಬುವವರ ಮೃತದೇಹ ಜಲಂಧರ್ ನಲ್ಲಿ ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ.
ಕುರಿಯಕೋಸ್ ಅವರ ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೆ, ಅವರ ಕುಟುಂಬಸ್ಥರು ಸಾವಿನ ಹಿಂದೆ ಕುತಂತ್ರಗಳಿರುವುದಾಗಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಫಾದರ್ ಕುರಿಯಕೋಸ್ ಅವರು ಬಿಷಪ್ ಫ್ರಾಂಕೋ ವಿರುದ್ಧ ಕೇರಳ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಕುರಿಯಕೋಸ್ ಅವರ ಸಹೋದರ ಜೋಸ್ ಕಟ್ಟುಥಾರ ಅವರು, ಸಹೋದರನ ಸಾವಿನ ಹಿಂದೆ ದೊಡ್ಡ ಪಿತೂರಿಯೇ ನಡೆದಿದೆ. ಬಿಷಪ್ ಫ್ರಾಂಕೋ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ. ಕೆಲ ದಿನಗಳಿಂದ ಚರ್ಚ್ ಅಧಿಕಾರಿಗಳಿಂದ ತಮಗೆ ಜೀವ ಬೆದರಿಕೆ ಕರೆ ಬರುತ್ತಿರುವುದಾಗಿಯೂ ಕುರಿಯಕೋಸ್ ಹೇಳುತ್ತಿದ್ದರು ಎಂದು ಹೇಳಿದ್ದಾರೆ.