ನವದೆಹಲಿ: ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಕೇಂದ್ರೀಯ ಜಾಗೃತ ಆಯೋಗ(ಸಿವಿಸಿ)ಕ್ಕೆ ಸಹಕರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಅಲ್ಲದೆ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವುದನ್ನು ಸಹ ಸಮರ್ಥಿಸಿಕೊಂಡಿದೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಬಿಐಯಲ್ಲಿನ ಆಂತರಿಕ ಕಲಹ ತನಿಖಾ ಸಂಸ್ಥೆಯ ಪರಿಸರವನ್ನು ಹಾಳು ಮಾಡುತ್ತಿತ್ತು. ಅಲ್ಲದೆ ಇದು ಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯಾಗುವ ಸಾಧ್ಯತೆ ಇತ್ತು ಮತ್ತು ಒಟ್ಟಾರೆ ಆಡಳಿತದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಬ್ಬರು ಉನ್ನತ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ಅಲೋಕ್ ವರ್ಮಾ ಅವರ ವಿರುದ್ಧ ಆಗಸ್ಟ್ 24ರಂದು ಸಿವಿಸಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಸಿವಿಸಿ, ಸೆಪ್ಟೆಂಬರ್ 14ರೊಳಗೆ ಸಂಬಂಧಪಟ್ಟ ದಾಖಲೆ ಮತ್ತು ಕಡತಗಳನ್ನು ಸಲ್ಲಿಸುವಂತೆ ಸಿಬಿಐ ನಿರ್ದೇಶಕರಿಗೆ ಮೂರು ಬಾರಿ ನೋಟಿಸ್ ನೀಡಿದೆ. ಆದರೂ ಅವರು ಯಾವುದೇ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಸರ್ಕಾರ ಸುದೀರ್ಘ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 14ರ ನಂತರವೂ ಹಲವು ದಾಖಲೆ ಸಲ್ಲಿಸುವಂತೆ ಸಿಬಿಐ ನಿರ್ದೇಶಕರಿಗೆ ಹಲವು ಬಾರಿ ಅವಕಾಶ ನೀಡಲಾಗಿದೆ. ಆದರೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ವಿರುದ್ಧದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಸಲ್ಲಿಸದೆ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ ಎಂದು ಸರ್ಕಾರ ದೂರಿದೆ.