ನವದೆಹಲಿ: ದೇಶದ ಬೆಳವಣಿಗೆಗೆ ರೈತರ ಕೊಡುಗೆ ಅಪಾರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಲಕ್ನೋದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕೃಷಿ ಕುಂಭ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತರನ್ನು ಹಿಂದೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ, ಈ ದೇಶವನ್ನು ಮುನ್ನಡೆಸುವವರು ರೈತರು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಕೃಷಿ ಕುಂಭ ಮೇಳ ಮುಂದಿನ ದಿನಗಳಲ್ಲಿ ರೈತರಿಗಾಗಿ ಹೊಸ ಮಾರ್ಗಗಳನ್ನು ಕಂಡುಹಿಡಿಯಲಿದೆ. ಖಾರಿಫ್ ಋತುವಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಕಂಡಿದೆ ಎಂದರು.
2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಬದ್ಧತೆಯನ್ನು ಮರು ಉಚ್ಛರಿಸಿದ ಪ್ರಧಾನಿ ಕೃಷಿ ಕುಂಭ ಮೇಳದಂತಹ ಕಾರ್ಯಕ್ರಮಗಳು ರೈತರಿಗೆ ಬಹಳ ಲಾಭವಾಗಲಿದೆ. ರೈತರಿಗೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಿದೆ ಎಂದರು.
ಜಪಾನ್ ಮತ್ತು ಇಸ್ರೇಲ್ ಸಹಭಾಗಿತ್ವ ದೇಶಗಳಾಗಿ ಕೆಲಸ ಮಾಡುತ್ತಿದ್ದು ತಮ್ಮ ತಂತ್ರಜ್ಞಾನಗಳನ್ನು ಭಾರತೀಯ ರೈತರೊಂದಿಗೆ ಹಂಚಿಕೊಳ್ಳಲಿದೆ.