ಆರ್ ಬಿಐ ಗೆ ಸ್ವಾಯತ್ತತೆ ಅಗತ್ಯ, ಸರ್ಕಾರ ಅದನ್ನು ಗೌರವಿಸಿದೆ: ಹಣಕಾಸು ಇಲಾಖೆ
ನವದೆಹಲಿ: ಆರ್ ಬಿಐ ಹಾಗೂ ಕೇಂದ್ರದ ನಡುವೆ ಉಂಟಾಗಿದ್ದ ತಿಕ್ಕಾಟ ಕೊನೆಗೂ ಅಂತ್ಯಗೊಂಡಿದ್ದು, ಆರ್ ಬಿಐ ನ ಸ್ವಾಯತ್ತತೆ ಅಗತ್ಯ, ಅದನ್ನು ಸರ್ಕಾರ ಪಾಲನೆ ಮಾಡಿ ಗೌರವಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಆರ್ ಬಿಐ ಕಾಯ್ದೆಯ ಚೌಕಟ್ಟಿನಲ್ಲಿ ಸ್ವಾಯತ್ತತೆಯನ್ನು ಸರ್ಕಾರ ಎಂದಿಗೂ ಗೌರವಿಸುತ್ತದೆ, ಅದನ್ನು ಈ ವರೆಗೂ ಪಾಲನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹಲವು ವಿಷಯಗಳಲ್ಲಿ ವ್ಯಾಪಕ ಸಮಾಲೋಚನೆಗಳನ್ನೂ ನಡೆಸಲಾಗಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಎರಡೂ ಸಹ ಸಾರ್ವಜನಿಕ ಹಿತಾಸಕ್ತಿಯನ್ನು, ದೇಶದ ಆರ್ಥಿಕತೆಯನ್ನು ಮುಂದಿಟ್ಟುಕೊಂಡು ನಡೆಯಬೇಕಿದೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದ ಊರ್ಜಿತ್ ಪಟೇಲ್ ಅವರನ್ನು ದಾರಿಗೆ ತರಲು ಈ ಹಿಂದೆ ಸರ್ಕಾರ ಆರ್'ಬಿಐ ಕಾಯ್ದೆಯ 7ನೇ ಸೆಕ್ಷನ್ ಅನ್ವಯ ಸೂಚನೆಗಳನ್ನು ರವಾನಿಸಿತ್ತು. ಇದು ಆರ್ ಬಿಐ ನ ಸ್ವಾಯತ್ತತೆಯನ್ನು ಕೇಂದ್ರ ಗೌರವಿಸುತ್ತಿಲ್ಲ ಎಂಬ ಆರೋಪಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸ್ಪಷ್ಟನೆ ನೀಡಿದೆ.